ರೈತರ ಪ್ರತಿಭಟನೆಯನ್ನು ದೇಶವ್ಯಾಪಿ ವಿಸ್ತರಿಸುತ್ತೇವೆ: ಹರ್ಯಾಣದಲ್ಲಿ ಅಬ್ಬರಿಸಿದ ರಾಕೇಶ್ ಟಿಕಾಯತ್

ಹೊಸದಿಲ್ಲಿ: ಹರ್ಯಾಣದಲ್ಲಿ ರವಿವಾರ ಕಿಸಾನ್ ಮಹಾ ಪಂಚಾಯತ್ ನಲ್ಲಿ ಸೇರಿದ್ದ ಭಾರೀ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ನಾಯಕ ರಾಕೇಶ್ ಟಿಕಾಯತ್, ಕೃಷಿ ಕಾನೂನುಗಳ ವಿರುದ್ಧ ಈಗ ನಡೆಯುತ್ತಿರುವ ಪ್ರತಿಭಟನೆಯನ್ನು ದೇಶದ ಮೂಲೆಮೂಲೆಗೆ ಕೊಂಡೊಯ್ಯುವೆ ಎಂದು ಘೋಷಿಸಿದ್ದಾರೆ.
ಭಿವಾನಿ ಸಮೀಪದ ಚರ್ಖಿ ದಾದ್ರಿ-ಭಿವಾನಿ ರಾಷ್ಟ್ರೀಯ ಹೆದ್ದಾರಿ(ಎನ್ ಎಚ್-148ಬಿ)ಯಲ್ಲಿರುವ ಕಿಟ್ಲಾನಾ ಟೋಲ್ ಪ್ಲಾಝಾ ಬಳಿ ಸಾವಿರಾರು ರೈತರು ಜಮಾಯಿಸಿದ್ದರು. ಟಿಕಾಯತ್ ಅವರಲ್ಲದೆ, ಪಂಜಾಬ್ ನ ಉನ್ನತ ರೈತ ನಾಯಕರಾದ ಬಲ್ಬೀರ್ ಸಿಂಗ್ ರಾಜೇವಾಲ್ ಹಾಗೂ ಡಾ.ದರ್ಶನ್ ಪಾಲ್ ಭಾಗವಹಿಸಿ ಮಾತನಾಡಿದರು.
ಕಿಟ್ಲಾನಾ ಟೋಲ್ ಪ್ಲಾಝಾದಿಂದ 160 ಕಿ.ಮೀ.ದೂರದಲ್ಲಿರುವ ಸನ್ಹೆದಾದಲ್ಲಿ ನಡೆದ ಪ್ರತ್ಯೇಕ ಮಹಾಪಂಚಾಯತ್ ನಲ್ಲಿ ಜನ ಸೇರಿದ್ದು, ಕಪ್ಪು ಕಾಯ್ದೆಗಳನ್ನು ಸಂಪೂರ್ಣ ಹಿಂಪಡೆಯಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಪ್ರಸಿದ್ದ ಬಿಕೆಯು ನಾಯಕ ಗುರ್ನಮ್ ಸಿಂಗ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
ರೈತರ ಪ್ರತಿಭಟನೆಯು ಕೆಲವೇ ರಾಜ್ಯಗಳಿಗೆ ಸೀಮಿತವಾಗುಳಿದಿಲ್ಲ. ಇದು ದೇಶಾದ್ಯಂತ ವ್ಯಾಪಿಸುತ್ತಿದೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು ಹಾಗೂ ಕ್ರಿಶ್ಚಿಯನ್ನರು ಎಲ್ಲರೂ ಸಹೋದರರು ಎಂದು ಘೋಷಣೆ ಕೂಗಿದ ಗುರ್ನಮ್ ಸಿಂಗ್ ಏಕತೆಯನ್ನು ಪ್ರದರ್ಶಿಸಿದರು.







