ಪ್ರೊ.ಭಗವಾನ್ ಮುಖಕ್ಕೆ ಮಸಿ: ವಕೀಲೆಯನ್ನು ಗಡಿಪಾರು ಮಾಡಲು ಸಾಹಿತಿಗಳು, ಚಿಂತಕರ ಆಗ್ರಹ

ಮೈಸೂರು,ಫೆ.7: ಬೆಂಗಳೂರಿನ ಎಸಿಎಂಎಂ ಕೋರ್ಟ್ ಆವರಣದಲ್ಲಿ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಮೇಲೆ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದು ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರೂರ ವಿಧಾನ ಎಂದು ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ಪತ್ರಕರ್ತರ ಭವನದಲ್ಲಿ ದಲಿತ ವೆಲ್‍ಫೇರ್ ಟ್ರಸ್ಟ್ ವತಿಯಿಂದ ರವಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಘಟನೆಯನ್ನು ಖಂಡಿಸಿದರಲ್ಲದೇ ಇದಕ್ಕೆ ಕಾರಣಕರ್ತರಾದ ಮೀರಾ ರಾಘವೇಂದ್ರ ಅವರನ್ನು ಗಡಿಪಾರು ಮಾಡಿ ಇವರ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡ ವಕೀಲೆ ಮೀರಾ ರಾಘವೇಂದ್ರ ಅವರನ್ನು ಕೂಡಲೇ ಭಾರತದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಮೀರಾ ರಾಘವೇಂದ್ರ ವಕೀಲೆಯಾಗುವ ಸಂದರ್ಭದಲ್ಲಿ ಸಂವಿಧಾನದ ಆಶಯಗಳಿಗೆ ಬದ್ಧರಾಗಿರುತ್ತೇನೆ ಎಂದು ಪ್ರಮಾಣ ಸ್ವೀಕರಿಸಿದ್ದಾರೆ. ಆದರೆ ಇಂದು, ನಾನು ವಕೀಲೆಯಾಗುವ ಮೊದಲು ಹಿಂದೂ ಹಾಗಾಗಿ ನಾನು ಇಂತಹ ಕೆಲಸ ಮಾಡಿದೆ ಎಂದು ಹೇಳುತ್ತಾರೆ. ಇವರು ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ. ಆಕೆ ಭಾರತದಲ್ಲಿ ಇರಲು ನಾಲಾಯಕ್. ಹಾಗಾಗಿ ಆಕೆಯನ್ನು ಭಾರತದಿಂದಲೇ ಗಡಿಪಾರು ಮಾಡಬೇಕು ಎಂದು ಹೇಳಿದರು.
ನಾವು ಸ್ವತಂತ್ರ ಭಾರತದಲ್ಲಿ ಇಲ್ಲ. ಬಹಿಷ್ಕೃತ ಭಾರತದಲ್ಲಿ ಇದ್ದೇವೆ. ಹಾಗಾಗಿಯೇ ರೈತರು, ದಲಿತರು, ಸಾಹಿತಿಗಳು ಸೇರಿದಂತೆ ಅನೇಕರ ಮೇಲೆ ಮಾಧ್ಯಮ, ಸರ್ಕಾರ ಮತ್ತು ವೈದಿಕರು ಪುಂಡಾಟ ನಡೆಸುತ್ತಿದ್ದಾರೆ. ಅವರನ್ನು ನಿಯಂತ್ರಿಸಬೇಕಾದ ಸರ್ಕಾರ ಕೂಡ ವೈದಿಕ ಮನೋಭಾವ ಹೊಂದಿದೆ. ವೈದಿಕರು ಎಂದರೆ ಧರ್ಮ, ಜಾತಿ, ಪಂಥ ಅಲ್ಲ, ಬರೀ ಬ್ರಾಹ್ಮಣರು ಮಾತ್ರ ಎಂದಲ್ಲ, ನಮ್ಮ ನಮ್ಮಲ್ಲಿಯೇ ಭಿನ್ನಭೇದ ಮಾಡುವವರು, ತಾರತಮ್ಯ ಮತ್ತು ಮಾಡುವವರೆಲ್ಲರೂ ವೈದಿಕರೇ ಎಂದು ಕಿಡಿಕಾರಿದರು.
ಪ್ರೊ.ಭಗವಾನ್ ತಮ್ಮದೇ ಅಭಿಪ್ರಾಯವನ್ನು ಮಂಡಿಸುತ್ತಿಲ್ಲ. ಈ ನಾಡಿನ ದೊಡ್ಡ ದೊಡ್ಡ ಇತಿಹಾಸಕಾರರು ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಿರುವುದನ್ನು ಅವರು ಪ್ರಸ್ತಾಪಿಸುತ್ತಿದ್ದಾರೆ. ಹಾಗಿದ್ದ ಮೇಲೆ ಭಗವಾನ್ ಹೇಗೆ ಹಿಂದೂ ವಿರೋಧಿ ? ಅವರು ವೈಚಾರಿಕೆ ನೆಲೆಗಟ್ಟಿನಲ್ಲಿ ವಿಷಯವನ್ನು ಮಂಡಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಸಂವಿಧಾನ ಅವಕಾಶ ನೀಡಿದೆ. ಆದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಇಂತಹ ಘಟನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದಲಿತ ವೆಲ್‍ಪೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, ನ್ಯಾಯಾಲಯದ ಆವರಣದಲ್ಲಿ ಪೊಲಿಸ್ ಸುರಕ್ಷತೆಯನ್ನು ಹೊಂದಿದ್ದ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ನಡೆಯುವುದು ನಮ್ಮ ಕಾನೂನು ವ್ಯವಸ್ಥೆಯ ದೌರ್ಬಲ್ಯವನ್ನು ತೋರುತ್ತದೆ. ಈ ಹಿಂದೆ ದೆಹಲಿಯ ಕೋರ್ಟ್ ಆವರಣದಲ್ಲಿ ಕನ್ಹಯ್ಯ ಕುಮಾರ್ ಅವರ ಮೇಲೆ ವಕೀಲರು ಹಲ್ಲೆ ನಡೆಸಿದ್ದರು. ಆ ಪ್ರಕರಣದಲ್ಲಿ ವಕೀಲರಿಗೆ ಶಿಕ್ಷೆಯಾಗಬೇಕಿತ್ತು. ನ್ಯಾಯಲಯಗಳ ಆವರಣದಲ್ಲಿ ಈ ರೀತಿಯ ಘಟನೆಗಳು ಸಂಭಿವಿಸುವುದು, ನ್ಯಾಯ ವ್ಯವಸ್ಥೆಯನ್ನು ಕಾಪಾಡಬೇಕಾದ ವಕೀಲರೇ ಇಂತಹ ಪುಂಡಾಟಿಕೆಯಲ್ಲಿ ತೊಡಗುವುದು ಶಿಕ್ಷಾರ್ಹ ಅಪರಾಧ ಎಂದು ಕಾನೂನು ರೂಪಿಸಬೇಕಿತ್ತು. ಆದರೆ ಇಂತಹ ಪ್ರಕರಣಗಳು ನಡೆಯುತ್ತಲೇ ಇದ್ದರೂ ಭಾರತದ ನ್ಯಾಯ ವ್ಯವಸ್ಥೆ ಮೌನ ಪ್ರೇಕ್ಷಕನಂತಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಪ್ರಗತಿಪರ ಚಿಂತಕ ನಾ.ದಿವಾಕರ, ಸಾಹಿತಿ ಬನ್ನೂರು ಕೆ.ರಾಜು, ವಕೀಲರುಗಳಾದ ನಂಜುಂಡಸ್ವಾಮಿ, ಅಂಬಳೆ ಶಿವಾನಂದಸ್ವಾಮಿ, ಮಾತನಾಡಿದರು.







