ಮಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿ ಚತುಷ್ಪಥ ರಸ್ತೆ-ಸೇತುವೆಗೆ ಶಂಕುಸ್ಥಾಪನೆ

ಮಂಗಳೂರು, ಫೆ.7: ಲೋಕೋಪಯೋಗಿ ಇಲಾಖೆ 2019ನೇ ಸಾಲಿನಲ್ಲಿ 9000 ಕೋಟಿ ರೂ. ಬಜೆಟ್ ಮಂಡಿಸಿ 8,788 ಕೋಟಿ ರೂ. ವೆಚ್ಚಮಾಡಿ ಶೇ. 97 ಪ್ರಗತಿ ಸಾಧಿಸಿದೆ. ಪ್ರಸಕ್ತ ಸಾಲಿನಲ್ಲಿ 8,400 ಕೋಟಿ ರೂ. ಬಜೆಟ್ ಮಂಡಿಸಿ ಡಿಸೆಂಬರ್ ತನಕ 5179 ಕೋಟಿ ರೂ. ತನಕ ವೆಚ್ಚ ಮಾಡಿ ಶೇ.60 ಪ್ರಗತಿ ಸಾಧಿಸಿದೆ ಎಂದು ಉಪಮುಖ್ಯಮಂತ್ರಿ, ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ಮಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿ ನಂ.67 ಚತುಷ್ಪಥ ರಸ್ಥೆ ಹಾಗೂ ಸೇತುವೆ ಒಟ್ಟು ಅಂದಾಜು 50 ಕೋಟಿ ರೂ ವೆಚ್ಚದ ಕಾಮಗಾರಿಗೆ ಮರವೂರಿನಲ್ಲಿ ರವಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇಲ್ಲಿಯವರೆಗೆ 6,579 ಕಿ.ಮೀ. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾಮುಖ್ಯ ರಸ್ತೆಗಳ ಅಭಿವೃದ್ಧಿ ಪಡಿಸಲಾಗಿದೆ. 322 ಸೇತುವೆ ಕಾಮಗಾರಿ ಪೂರ್ಣಗೊಳಿಸಿದ್ದೇವೆ. 418 ಕಿ.ಮೀ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭಿಸಿದ್ದೇವೆ. 30 ಕಿ.ಮೀ ಪೂರ್ಣಗೊಳಿಸಿದ್ದೇವೆ ಎಂದರು.
ಈಗಾಗಲೇ 15,510 ಕಿ.ಮೀ ಹಳ್ಳಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಪ್ರಧಾನ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. 9601 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಈ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಕರೊನಾ ಮತ್ತು ಪ್ರವಾಹದ ಸಂಕಷ್ಟಗಳ ನಡುವೆಯೂ ಸರ್ಕಾರ ಗರಿಷ್ಠ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲು ಶ್ರಮಿಸಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮೀನುಗಾರಿಕೆ ಸಚಿವ ಎಸ್.ಅಂಗಾರ, ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ., ಮುಖಂಡರಾದ ಸುಧೀರ್ ಶೆಟ್ಟಿ, ಸುಪ್ರಿತಾ ಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು. ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಕಾಂತರಾಜು ವಂದಿಸಿದರು.
ದಕ್ಷಿಣ ಕನ್ನಡ ಸುಸಂಸ್ಕೃತ ರಾಜಕಾರಣದಲ್ಲಿ ರಾಜ್ಯಕ್ಕೆ ನಂಬರ್ ವನ್ ಇದೆ. ಇಲ್ಲಿನ ರಾಜಕಾರಣಿಗಳು, ಶಾಸಕರು, ಮಂತ್ರಿಗಳು, ಜನಪ್ರತಿನಿಧಿಗಳು ಸರಳ ಸಜ್ಜನರು ಎಂದು ಉಪಮುಖ್ಯಮಂತ್ರಿ, ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ಶ್ಲಾಘಿಸಿದರು.
ಕರ್ನಾಟಕ ಮಾದರಿ ರಾಜ್ಯವಾಗಲಿದೆ: ಡಿಸಿಎಂ
ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರವಾಹ, ಕೊರೋನ ಸಂಕಷ್ಟದ ನಡುವೆಯೂ ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದೆ ಕರ್ನಾಟಕವನ್ನು ದೇಶದಲ್ಲಿ ಮಾದರಿ ರಾಜ್ಯವನ್ನಾಗಿಸುವ ಕನಸು ನಮ್ಮ ಸರಕಾರದ್ದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಸರಕಾರದಿಂದ ಅನುದಾನ ತರಿಸಿ ರಾತ್ರಿ, ಹಗಲೆನ್ನದೆ ಶ್ರಮ ವಹಿಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿ ದ್ದಾರೆ. ಸಾರ್ವಜನಿಕರು ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಅಡ್ಡಿ ಮಾಡದೆ ಸರಕಾರದ ಅನುದಾನ ಸದ್ಬಳಕೆಗೆ ಸಹಕಾರ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಜಿಲ್ಲೆಯಲ್ಲಿ ಅಭಿವೃದ್ದಿ ಕೆಲಸಗಳು ವೇಗ ಪಡೆದಿವೆ. ಸ್ಮಾರ್ಟ್ ಸಿಟಿ ಯೋಜನೆಗೆ 700 ಕೋಟಿ ರೂ. ಬಂದಿದೆ. ನೇತ್ರಾವತಿ ಹಳಿ ದ್ವಿಗುಣ ಕಾಮಗಾರಿ 28 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಎಂಆರ್‌ಪಿಎಲ್ 1810 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಗೊಂಡಿದೆ ಹೀಗೆ ವಿವಿಧ ಕಾಮಗಾರಿಗಳು ಪೂರ್ಣಗೊಳ್ಳುತ್ತಿವೆ ಮತ್ತು ಚಾಲನೆ ಪಡೆಯುತ್ತಿವೆ ಎಂದರು.







