ಸಾಹಿತಿಗೆ ಹಲ್ಲೆ ನಡೆಸಿದರೂ ಕನ್ನಡ ಸಾಹಿತ್ಯ ಪರಿಷತ್ ಧ್ವನಿ ಎತ್ತದಿರುವುದು ದುರದೃಷ್ಟಕರ: ಬನ್ನೂರು ಕೆ.ರಾಜು

ಮೈಸೂರು: ಸಾಹಿತಿಗಳ ಬೆನ್ನಿಗೆ ನಿಲ್ಲಬೇಕಾದ ಮಾತೃ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಇಂದು ಸಾಹಿತಿಗಳ ಮೇಲೆ ಹಲ್ಲೆ ನಡೆದರೂ ಧ್ವನಿ ಎತ್ತದಿರುವುದು ಅತ್ಯಂತ ದರುದೃಷ್ಟಕರ ಎಂದು ಸಾಹಿತಿ ಬನ್ನೂರು ಕೆ.ರಾಜು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ದಲಿತ ವೆಲ್‍ಫೇರ್ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜೈನ ಶಾಸ್ತ್ರದ ಇತಿಹಾಸ ತಜ್ಞ ಹಂಪನಾ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಯಿತು. ಇಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮೇಲೆ ಮಸಿ ಬಳಿದು ಹಲ್ಲೆ ಮಾಡಲಾಗಿದೆ. ಆದರೆ ಇದುವರೆಗೂ ಕನ್ನಡ ಸಾಹಿತ್ಯ ಪರಿಷತ್ ಖಂಡನೆ ವ್ಯಕ್ತಪಡಿಸಿಲ್ಲ. ಯಾವೊಬ್ಬ ವ್ಯಕ್ತಿಯೂ ಚಕಾರ ಎತ್ತಿಲ್ಲ. ಹಾಗಿದ್ದ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಏಕೆ ಇರಬೇಕು ಎಂದು ಪ್ರಶ್ನಿಸಿದರು.
ಕನ್ನಡ ನಾಡು ನುಡಿ ಮತ್ತು ಸಾಹಿತಿಗಳ ಹಿತಕ್ಕೆಂದ ಸ್ಥಾಪಿಸಲ್ಪಟ್ಟಿರುವ ಸಂಸ್ಥೆ ಇಂದು ಅದೇ ವ್ಯಕ್ತಿಗಳಿಗೆ ಅನ್ಯಾಯವಾದರೂ ಮಾತನಾಡುತ್ತಿಲ್ಲ. ಮಾತನಾಡಿದರೆ ನಮ್ಮ ಬುಡಕ್ಕೆ ತೊಂದರೆಯಾದರೆ ಎಂಬ ಭಯ ಅವರಲ್ಲಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳ ಹಿತಕ್ಕೆ ನಿಲ್ಲಬೇಕಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಸಾಹಿತ್ಯ ಪರಿಷತ್ ಹೆಸರಿಗೆ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಾಹಿತ್ಯ ಪರಿಷತ್ ಅವಧಿ ಮೂರು ವರ್ಷ ಕಳೆದರೂ ಸರ್ಕಾರ ಆಡಳಿತಾಧಿಕಾರಿ ನೇಮಿಸಿಲ್ಲ. ಅಧ್ಯಕ್ಷರಾಗಿದ್ದವರೂ ಈಗಲೂ ಮುಂದುವರಿದು ಸಮ್ಮೇಳನದ ಹೆಸರಿನಲ್ಲಿ ದುಡ್ಡು ಮಾಡುತ್ತಿದ್ದಾರೆ. ಸಾಹಿತಿಗಳಿಗೆ ನಾಯಿಗೆ ಹೊಡೆದ ಹಾಗೆ ಹೊಡೆದರೂ ಇವರು ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವ ದೊಡ್ಡರಂಗೇಗೌಡ ಹಿಂದಿ ಬಗ್ಗೆ ಮಾತನಾಡುತ್ತಾರೆ. ಆದರೆ ಸಾಹಿತಿಗಳ ಬಗ್ಗೆ ಆದ ಅವಮಾನ ಮತ್ತು ಹಲ್ಲೆಗಳ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ಸಾಹಿತ್ಯಾಸಕ್ತರ ಹಿತಕ್ಕಿಂತ ಅಧಿಕಾರ ಮುಖ್ಯವಾಗಿದೆ. ಮಾತನಾಡಿದರೆ ಅಧ್ಯಕ್ಷಗಾದಿಯಿಂದ ಕೆಳಗೆ ಇಳಿಸಿಬಿಟ್ಟರೆ ಎಂಬ ಭಯ. ಹಾಗಾಗಿಯೇ ಯಾರೊಬ್ಬರು ಮಾತನಾಡುತ್ತಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯದ ಸಂದರ್ಭದಲ್ಲಿ ಜೈ ಹಿಂದೂ ಘೋಷಣೆ ಮೊಳಗುತ್ತಿತ್ತು, ನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈ ಜವಾನ್ ಜೈ ಕಿಸಾನ್ ಘೋಷಣೆ ಪಸರಿಸಿ ಎಲ್ಲರಲ್ಲೂ ದೇಶಪ್ರೇಮ ಮೂಡಿಸಿದ್ದರು. ಆದರೆ ಇಂದು ನಮ್ಮ ರಾಷ್ಟ್ರದ ಸ್ಲೋಗನ್ ಜೈ ಶ್ರೀರಾಮ್ ಆಗಿರುವುದು ಅತ್ಯಂತ ದರುದೃಷ್ಟಕರ.
-ಪ್ರೊ.ಪಿ.ವಿ.ನಂಜರಾಜೇ ಅರಸ್, ಇತಿಹಾಸ ತಜ್ಞಕುವೆಂಪು ಅವರ ಶಿಷ್ಯರಾಗಿ ಶೇಕ್ಸ್ ಪಿಯರ್ ಅವರ ಇಂಗ್ಲೀಷ್ ಅನುವಾಧವನನು ಕನ್ನಡಕ್ಕೆ ತರ್ಜುಮೆ ಮಾಡಿ ಈ ನಾಡಿನ ಪ್ರತಿನಿಧಿ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಅವರು ಜಾತಿಯಲ್ಲಿ ಒಕ್ಕಲಿಗರಾಗಿ ಹುಟ್ಟಿದ್ದಾರೆ. ಅವರ ಮೇಲೆ ಹಲ್ಲೆ ನಡೆದರೂ ಒಕ್ಕಲಿಗ ಸಮುದಾಯ ಧನಿಯತ್ತದಿರುವುದು ಬೇಸರ ತರಿಸಿದೆ.
-ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪ್ರಗತಿಪರ ಚಿಂತಕ







