ಭಾರತದ ಹೆಸರು ಕೆಡಿಸಲು ಪಿತೂರಿ ನಡೆಯುತ್ತಿದೆ, ಅವರು ಭಾರತೀಯ ಚಹಾವನ್ನೂ ಬಿಟ್ಟಿಲ್ಲ: ಪ್ರಧಾನಿ

ಧೇಕಿಯಾಜುಲಿ (ಅಸ್ಸಾಂ),ಫೆ.7: ದೇಶದ ವರ್ಚಸ್ಸಿಗೆ ಕಳಂಕ ಹಚ್ಚಲು ಅಂತರರಾಷ್ಟ್ರೀಯ ಪಿತೂರಿಯೊಂದು ನಡೆಯುತ್ತಿದೆ ಮತ್ತು ಇದರ ರೂವಾರಿಗಳು ಎಷ್ಟೊಂದು ಕೆಳಮಟ್ಟಕ್ಕಿಳಿದಿದ್ದಾರೆ ಎಂದರೆ ಭಾರತೀಯ ಚಹಾವನ್ನೂ ಬಿಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಇಲ್ಲಿ ‘ಕೆಲವು ದಾಖಲೆಗಳನ್ನು’ ಉಲ್ಲೇಖಿಸಿ ಹೇಳಿದರು.
ಸೋನಿತ್‌ಪುರ ಜಿಲ್ಲೆಯ ಧೇಕಿಯಾಜುಲಿಯಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,ಚಹಾ ಉದ್ಯಮದ ಮೇಲೆ ಇಂತಹ ದಾಳಿಯನ್ನು ಅಥವಾ ಇಂತಹ ದಾಳಿಗಳ ಬಗ್ಗೆ ಮೌನವಾಗಿರುವವರನ್ನು ನೀವು ಬೆಂಬಲಿಸುತ್ತಿರಾ ಎಂದು ಹೆಚ್ಚಿನ ಸಂಖ್ಯೆಯಲ್ಲಿದ್ದ ಚಹಾತೋಟಗಳ ಕಾರ್ಮಿಕರನ್ನು ಪ್ರಶ್ನಿಸಿದರು. ಈ ಸಂಚುಕೋರರು ಜಾಗತಿಕ ಮಟ್ಟದಲ್ಲಿ ವ್ಯವಸ್ಥಿತ ರೀತಿಯಲ್ಲಿ ಭಾರತೀಯ ಚಹಾ ಉದ್ಯಮದ ಹೆಸರನ್ನು ಕೆಡಿಸಲು ಯೋಜಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನೀವು ಕೇಳಿರಬಹುದು. ಕೆಲವು ಅಂತರರಾಷ್ಟ್ರೀಯ ಶಕ್ತಿಗಳು ಭಾರತೀಯ ಚಹಾ ಉದ್ಯಮದ ಅನನ್ಯತೆಯ ಮೇಲೆ ದಾಳಿಗೆ ಪ್ರಯತ್ನಿಸುತ್ತಿವೆ ಎನ್ನುವುದನ್ನು ಬಹಿರಂಗಗೊಳಿಸುವ ಕೆಲವು ದಾಖಲೆಗಳು ಲಭ್ಯವಾಗಿವೆ ಎಂದರು.
ಅಸ್ಸಾಂ ಸರಕಾರವು ಚಹಾತೋಟಗಳ ಕಾರ್ಮಿಕರಿಗಾಗಿ ಆರಂಭಿಸಿರುವ ಯೋಜನೆಗಳ ಕುರಿತು ಮಾತನಾಡಿದ ಮೋದಿ,‘ದೇಶವು ಸಂಚುಕೋರರ ಹುನ್ನಾರ ಯಶಸ್ವಿಯಾಗಲು ಎಂದೂ ಬಿಡುವುದಿಲ್ಲ ಎಂದು ಅಸ್ಸಾಮಿನ ನೆಲದಿಂದ ಅವರಿಗೆ ತಿಳಿಸಲು ನಾನು ಬಯಸುತ್ತೇನೆ. ಇಂತಹ ದಾಳಿಗಳಿಗೆ ನಮ್ಮ ಚಹಾತೋಟಗಳ ಕಾರ್ಮಿಕರ ಕಠಿಣ ಪರಿಶ್ರಮವನ್ನು ಎದುರಿಸುವ ಸಾಮರ್ಥ್ಯವಿಲ್ಲ ಮತ್ತು ನಮ್ಮ ಕಾರ್ಮಿಕರು ಈ ಹೋರಾಟದಲ್ಲಿ ಗೆಲ್ಲುತ್ತಾರೆ ’ ಎಂದರು.





