ತೃಣಮೂಲ ಕಾಂಗ್ರೆಸ್ ಪಕ್ಷದೊಂದಿಗೆ ಕಾಂಗ್ರೆಸ್-ಎಡಪಕ್ಷಗಳಿಂದ ‘ಮ್ಯಾಚ್ ಫಿಕ್ಸಿಂಗ್' :ಪ್ರಧಾನಿ ವಾಗ್ದಾಳಿ

ಹೊಸದಿಲ್ಲಿ: ಮುಂಬರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಎಡಪಕ್ಷ ಹಾಗೂ ಕಾಂಗ್ರೆಸ್ ಇನ್ನಷ್ಟೇ ಸೀಟು ಹಂಚಿಕೆಯನ್ನು ಅಂತಿಮಗೊಳಿಸಬೇಕಾಗಿದೆ. ಈ ಮಧ್ಯೆ ರಾಜ್ಯದ ಹಲ್ದಿಯಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಡಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನೊಂದಿಗೆ 'ಮ್ಯಾಚ್ ಫಿಕ್ಸಿಂಗ್' ಮಾಡಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.
"ಈ ಪಕ್ಷಗಳು ರಹಸ್ಯವಾಗಿ ಭೇಟಿಯಾಗುತ್ತಿವೆ ಹಾಗೂ ಯೋಜನೆಯನ್ನು ರೂಪಿಸುತ್ತಿವೆ. ಕೇರಳದಲ್ಲೂ ಕೂಡ ಎಡಪಂಥೀಯರು ಐದು ವರ್ಷಗಳ ಕಾಲ ಆಳುತ್ತಾರೆ ಹಾಗೂ ಮುಂದಿನ ಐದು ವರ್ಷ ಕಾಂಗ್ರೆಸ್ ಆಡಳಿತ ನಡೆಸುವ ಕುರಿತು ನಿರ್ಧರಿಸಿವೆ. ನೀವು ಈ ಕಳಂಕದ ಭಾಗವಾಗಬಾರದು'' ಎಂದು ಪ್ರಧಾನಿ ಮೋದಿ ಹೇಳಿದರು.
“ಯಾರಾದರೂ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರೆ, ಅದು ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಮಾತ್ರ. ಬಂಗಾಳದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಪ್ರಧಾನಿಗೆ ಸೂಚಿಸಲಾಗಿದೆ. ಆದ್ದರಿಂದ ಅವರು ನೆಪ ಹೇಳುತ್ತಿದ್ದಾರೆ'' ಎಂದು ಸಿಪಿಎಂ ಶಾಸಕ ಸುಜನ್ ಚಕ್ರವರ್ತಿ ಹೇಳಿದ್ದಾರೆ.





