ಕೋಮು ಸಂಘರ್ಷಕ್ಕೆ ಪ್ರೇರಣೆ ನೀಡುವ ಭಾಷಣಗಳು ಖಂಡನೀಯ: ಎಸ್.ವೈ.ಎಸ್.
ಬಿ.ಸಿ ರೋಡ್ : ಎಲ್ಲ ಜಾತಿ ಮತ ಧರ್ಮದ ಅನುಯಾಯಿಗಳು ಸಾಮರಸ್ಯ ಮತ್ತು ಸಹಿಷ್ಣುತೆಯಿಂದ ಬದುಕುವುದು ನಮ್ಮ ನಾಡಿನ ಸೌಹಾರ್ದ ಪರಂಪರೆ. ಇದಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೆಲವು ರಾಜಕೀಯ ಪಕ್ಷಗಳ ನಾಯಕರು ಬಹಿರಂಗ ವೇದಿಕೆಗಳಲ್ಲಿ ಸಂಘರ್ಷಕ್ಕೆ ಆಹ್ವಾನ ನೀಡುತ್ತಿರುವುದು ಖಂಡನೀಯ ಎಂದು ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದು ಸಮಾಜದ ವಿವಿಧ ವರ್ಗಗಳ ಮಧ್ಯೆ ಅಪನಂಬಿಕೆ ಮತ್ತು ಸಂದೇಹಕ್ಕೆ ಕಾರಣವಾಗಲಿದೆ. ಇಸ್ಲಾಂ ಯಾವತ್ತೂ ಸಂಯಮ ಮತ್ತು ಶಾಂತಿಗೆ ಮಹತ್ವ ನೀಡುವ ಧರ್ಮವಾಗಿದೆ. ಭಿನ್ನತೆಗಳನ್ನು ಸೈದ್ಧಾಂತಿಕ ವಾಗಿಯೂ ಕಾನೂನುಗಳ ಮೂಲಕವೂ ಎದುರಿಸಬೇಕು. ಅದಲ್ಲದೆ ಪರಸ್ಪರ ರನ್ನು ಎತ್ತಿಕಟ್ಟುವ ಕೆಲಸ ಆಗಬಾರದು. ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸಮುದಾಯವನ್ನು ಬಲಿಕೊಡುವ ಕೆಲಸದಿಂದ ಅಂತಹ ನಾಯಕರು ಬಿಟ್ಟು ನಿಲ್ಲಬೇಕು ಎಂದು ಎಸ್.ವೈ.ಎಸ್. ಕರೆ ನೀಡಿದೆ.
ಇತ್ತೀಚೆಗೆ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಸುನ್ನೀ ಸೆಂಟರ್‌ನಲ್ಲಿ ನಡೆದ ರಾಜ್ಯ ಎಸ್.ವೈ.ಎಸ್. ಕ್ಯಾಬಿನೆಟ್ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಿದ್ದರು.
ಎಸ್.ಪಿ.ಹಂಝ ಸಖಾಫಿ, ಜಿ.ಎಂ.ಎಂ. ಕಾಮಿಲ್, ಅಬ್ದುಲ್ ಹಕೀಂ ಹಾಸನ, ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಅಶ್ರಫ್ ಕಿನಾರ, ಡಿಕೆ ಉಮರ್ ಸಖಾಫಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಸ್ವಾಗತಿಸಿದರು.







