ಮಾತುಕತೆ ಮುಂದುವರಿಸಲು ರೈತ ಮುಖಂಡರ ಒಪ್ಪಿಗೆ

ಹೊಸದಿಲ್ಲಿ, ಫೆ.8: ಮಾತುಕತೆ ಮುಂದುವರಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಆಹ್ವಾನವನ್ನು ಸ್ವೀಕರಿಸಿರುವ ರೈತ ಮುಖಂಡರು, ಮಾತುಕತೆಗೆ ಸರಕಾರವೇ ದಿನಾಂಕ ನಿಗದಿಪಡಿಸಲಿ ಎಂದಿದ್ದಾರೆ.
ಆದರೆ, ರಾಜ್ಯಸಭೆಯಲ್ಲಿ ಮಾತನಾಡಿದ ಸಂದರ್ಭ ಪ್ರಧಾನಿ ಮೋದಿ ‘ದೇಶದಲ್ಲಿ ಆಂದೋಲನ ಜೀವಿಗಳು ಎಂಬ ಹೊಸ ತಳಿಯ ಚಳವಳಿಗಾರರು ಉದ್ಭವಿಸಿದ್ದಾರೆ’ ಎಂದು ಹೇಳಿರುವುದಕ್ಕೆ ತಮ್ಮ ತೀವ್ರ ಆಕ್ಷೇಪವಿದೆ. ಚಳವಳಿಗೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಪಾತ್ರವಿದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಸರಕಾರದೊಂದಿಗೆ ಯಾವತ್ತೂ ಮಾತುಕತೆಗೆ ನಿರಾಕರಿಸಿಲ್ಲ.
ಮಾತುಕತೆಗೆ ಕರೆದಾಗಲೆಲ್ಲಾ ನಾವು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ್ದೇವೆ. ಮುಂದಿನ ಸುತ್ತಿನ ಮಾತುಕತೆಗೂ ಸಿದ್ಧವಿದ್ದು ಸರಕಾರ ದಿನಾಂಕ ಮತ್ತು ಸಮಯ ನಿಗದಿಪಡಿಸಲಿ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ಸದಸ್ಯ ಶಿವಕುಮಾರ್ ಕಾಕ್ಕ ಹೇಳಿದ್ದಾರೆ. ವಿವಾದಾತ್ಮಕ ಕೃಷಿ ಕಾಯ್ದೆಯ ಕುರಿತು ಸರಕಾರ ಹಾಗೂ ಪ್ರತಿಭಟನಾ ನಿರತ ರೈತರ ಮಧ್ಯೆ 11 ಸುತ್ತುಗಳ ಮಾತುಕತೆ ನಡೆದಿದ್ದು, ಇತ್ತೀಚೆಗೆ ನಡೆದ 11ನೇ ಸುತ್ತಿನ ಮಾತುಕತೆ ಸಂದರ್ಭ ಸರಕಾರ ಕೃಷಿ ಕಾಯ್ದೆಗಳನ್ನು 12ರಿಂದ 18 ತಿಂಗಳವರೆಗೆ ಅಮಾನತಿನಲ್ಲಿಡಲು ಸಿದ್ಧ ಎಂದು ಹೇಳಿತ್ತು. ಆದರೆ ಇದನ್ನು ರೈತ ಸಂಘಟನೆ ನಿರಾಕರಿಸಿತ್ತು.







