ಮೋದಿ ಇರುವಾಗಲೇ ನಿಮ್ಮ ಅವಕಾಶ ಪಡೆದುಕೊಳ್ಳಿ: ಕಾಂಗ್ರೆಸ್ ಮುಖಂಡ ಆಝಾದ್ ರನ್ನು ಛೇಡಿಸಿದ ಪ್ರಧಾನಿ

ಹೊಸದಿಲ್ಲಿ, ಫೆ.8: ಸೋಮವಾರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳತ್ತ ವಾಗ್ದಾಳಿ ನಡೆಸುವ ಜೊತೆಗೆ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್‌ರನ್ನು ಶ್ಲಾಘಿಸಿ ಲಘು ದಾಟಿಯಲ್ಲಿ ಛೇಡಿಸಿದ ಘಟನೆ ನಡೆದಿದೆ.
‘ಆಝಾದ್ ಸಾಹೇಬರು ಯಾವಾಗಲೂ ಸೌಮ್ಯ ಭಾಷೆಯನ್ನೇ ಬಳಸುತ್ತಾರೆ. ಅವರು ಜಮ್ಮು-ಕಾಶ್ಮೀರ ಚುನಾವಣೆಯನ್ನೂ ಶ್ಲಾಘಿಸಿದ್ದರು. ಆದರೆ ನಿಮ್ಮ ಪಕ್ಷಕ್ಕೆ ಇದು ಪಥ್ಯವಾಗುತ್ತದೆಯೇ, ಇದು ಜಿ-23ರ ಸಲಹೆ ಎಂದು ಭಾವಿಸಿ ನಕಾರಾತ್ಮಕವಾಗಿ ಯೋಚಿಸಬಹುದೇ ಎಂದು ನನಗೆ ಭಯವಾಗುತ್ತಿದೆ. ಮೋದಿ ಇರುವಾಗಲೇ ನಿಮ್ಮ ಅವಕಾಶ ಪಡೆದುಕೊಳ್ಳಿ’ ಎಂದು ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಗೊತ್ತುವಳಿಗೆ ಉತ್ತರಿಸುತ್ತಿದ್ದಾಗ ಲಘುದಾಟಿಯಲ್ಲಿ ಮೋದಿ ಛೇಡಿಸಿದರು.
ಕಾಂಗ್ರೆಸ್ ಪಕ್ಷದೊಳಗೆ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಆಗ್ರಹಿಸಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಗೆ ಪಕ್ಷದ 23 ಹಿರಿಯ ಮುಖಂಡರು ಪತ್ರ ಬರೆದಿದ್ದರು. ಇವರು ಜಿ-23 ಎಂದು ಹೆಸರಾಗಿದ್ದಾರೆ. ಈ ಹಿಂದೆ ರಾಜ್ಯವಾಗಿದ್ದ ಜಮ್ಮು ಕಾಶ್ಮೀರದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ 4 ಸದಸ್ಯರ ಅವಧಿ ಫೆಬ್ರವರಿ 15ಕ್ಕೆ ಅಂತ್ಯವಾಗಲಿದ್ದು ಇದರೊಂದಿಗೆ ಜಮ್ಮುಕಾಶ್ಮೀರ ರಾಜ್ಯಸಭೆಯಲ್ಲಿ ಪ್ರಾತಿನಿಧ್ಯ ಕಳೆದುಕೊಳ್ಳಲಿದೆ. ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿರುವ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ಇದುವರೆಗೆ ಯಾವುದೇ ಘೋಷಣೆ ಹೊರಬಿದ್ದಿಲ್ಲ.







