ಈ ರಾಜ್ಯದ 2 ಶಾಲೆಯ 192 ವಿದ್ಯಾರ್ಥಿಗಳು, 72 ಸಿಬ್ಬಂದಿಗೆ ಕೊರೋನ ಸೋಂಕು

ತಿರುವನಂತಪುರ, ಫೆ. 8: ಮಲಪ್ಪುರಂ ಜಿಲ್ಲೆಯ ಎರಡು ಶಾಲೆಗಳ 10ನೇ ತರಗತಿಯ 192 ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಂಪರ್ಕ ಪತ್ತೆ ಕಾರ್ಯ ಆರಂಭಿಸಲಾಗಿದೆ. ‘‘ಓರ್ವ ವಿದ್ಯಾರ್ಥಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನ ಸೋಂಕು ದೃಢಪಟ್ಟಿತ್ತು.
ಸಂಪರ್ಕ ಪತ್ತೆ ಹಾಗೂ ನಿಗಾದ ಭಾಗವಾಗಿ ಇತರ ವಿದ್ಯಾರ್ಥಿಗಳಿಗೂ ಕೊರೋನ ಪರೀಕ್ಷೆ ನಡೆಸಲಾಗಿತ್ತು. ಈ ಸಂದರ್ಭ ಇದೇ ಪ್ರದೇಶದಲ್ಲಿರುವ ಇನ್ನೊಂದು ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿತು’’ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಕೆ. ಸಕೀನಾ ತಿಳಿಸಿದ್ದಾರೆ. ಇದಲ್ಲದೆ, ಎರಡು ಶಾಲೆಗಳ ಒಟ್ಟು 72 ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಪ್ಪುರಂನ ಎರಡು ಶಾಲೆಗಳಲ್ಲಿ 638 ವಿದ್ಯಾರ್ಥಿಗಳನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಒಂದು ಶಾಲೆಯ 149 ಹಾಗೂ ಇನ್ನೊಂದು ಶಾಲೆಯ 43 ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದೇ ರೀತಿ ಶಿಕ್ಷಕರನ್ನು ಒಳಗೊಂಡಂತೆ ಶಾಲೆಯ ಸಿಬ್ಬಂದಿಯನ್ನು ಕೂಡ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಒಂದು ಶಾಲೆಯ 39 ಹಾಗೂ ಇನ್ನೊಂದು ಶಾಲೆಯ 33 ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







