ವಿಪಕ್ಷಗಳ ವಿರೋಧದ ನಡುವೆಯೂ ವಿಧೇಯಕಗಳ ಅಂಗೀಕಾರ

ಬೆಂಗಳೂರು, ಫೆ.8: ವಿಪಕ್ಷಗಳ ವಿರೋಧದ ನಡುವೆಯೂ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಕಾನೂನು (ತಿದ್ದುಪಡಿ) ವಿಧೇಯಕ-2021ಅನ್ನು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಕಾನೂನು (ತಿದ್ದುಪಡಿ) ವಿಧೇಯಕ ಕುರಿತು ಸೋಮವಾರ ವಿಧಾನ ಪರಿಷತ್ತಿನಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ವಿವರಿಸಿದಾಗ, ಹಲವು ಸದಸ್ಯರು ವಿಧೇಯಕದ ಮೇಲೆ ಚರ್ಚೆ ಮಾಡಿದ ನಂತರ ಸದನದಲ್ಲಿ ವಿಧೇಯಕಕ್ಕೆ ಧ್ವನಿ ಮತದ ಒಪ್ಪಿಗೆ ದೊರೆಯಿತು.
ಇದಕ್ಕೂ ಮುನ್ನ ಸಚಿವ ಎಂ.ಟಿ.ಬಿ.ನಾಗರಾಜ್, ಆಸ್ತಿ ತೆರಿಗೆ ಪಾವತಿಸದಿರುವವರಿಗೆ ಒಂದು ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಆಸ್ತಿ ತೆರಿಗೆ ಪಾವತಿಸಿರುವ ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಶೇ.5ರಷ್ಟು ರಿಯಾಯಿತಿಯನ್ನು ಮುಂದಿನ ಆಸ್ತಿ ತೆರಿಗೆ ಕಟ್ಟುವ ವೇಳೆ ಹೊಂದಾಣಿಕೆ ಮಾಡಲಾಗುವುದು ಎಂದರು.
ತದನಂತರ ಸರಕಾರದ ಪರ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಈಗಾಗಲೇ ಆಸ್ತಿ ತೆರಿಗೆ ಪಾವತಿಸಿದವರಿಗೆ ಮುಂದಿನ ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲಿ ಶೇ.5ರಷ್ಟು ರಿಯಾಯಿತಿ ಹೊಂದಾಣಿಕೆ ಮಾಡಲು ತಿದ್ದುಪಡಿ ತರಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಮತ್ತೋರ್ವ ಬಿಜೆಪಿಯ ಸದಸ್ಯ ರವಿಕುಮಾರ್, ಬಡವರಿಗಾಗಿ ಸರಕಾರ ಹತ್ತು ಹಲವು ಕಾರ್ಯಕ್ರಮ ಹಾಕಿಕೊಂಡಿದೆ. ಜತೆಗೆ, ಕೋವಿಡ್ ಸಂದರ್ಭದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲು ತಿದ್ದುಪಡಿ ತರಲಾಗಿದೆ ಎಂದು ನುಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೋವಿಡ್ ಸಂಕಷ್ಟದಲ್ಲಿ ಬಾಡಿಗೆ ಪಡೆಯದವರು ಹೇಗೆ ತೆರಿಗೆ ಪಾವತಿಸುತ್ತಾರೆ. ಸರಕಾರಕ್ಕೆ ಪ್ರತಿಷ್ಠೆ ಬೇಡ. ವಿಧೇಯಕ ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಆದಾಯತೆರಿಗೆ ಕಟ್ಟುವವರಿಗೆ ರಿಯಾಯಿತಿ ಬೇಡ. ಆದರೆ ಬಡವರಿಗೆ ಶೇ.50ರಷ್ಟು 1 ವರ್ಷ ಆಸ್ತಿ ತೆರಿಗೆ ಪಾವತಿಯಲ್ಲಿ ರಿಯಾಯಿತಿ ನೀಡಬೇಕು. ಶೇ.5ರಷ್ಟು ರಿಯಾಯಿತಿ ಸಾಲದು ಎಂದು ಸದನದ ಗಮನ ಸೆಳೆದರು.
ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಜೂನ್ ನಂತರ ತೆರಿಗೆ ಪಾವತಿಸದವರು ಶೇ.2ರಷ್ಟು ದಂಡ ಪಾವತಿಸಬೇಕು. ಇನ್ನು, ಎಪ್ರಿಲ್ ಒಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ.5ರಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಹೇಳಿದರು.
ತದನಂತರ, ಕಾಂಗ್ರೆಸ್ ಹಿರಿಯ ಸದಸ್ಯ ನಸೀರ್ ಅಹ್ಮದ್, ಸರಕಾರವೇ ಬಾಡಿಗೆ ಪಾವತಿ ಬಗ್ಗೆ ರಿಯಾಯಿತಿ ನೀಡಿತ್ತು. ಶೇ.50ರಷ್ಟಾದರೂ ತೆರಿಗೆ ಪಾವತಿಸಲು ರಿಯಾಯಿತಿ ಕೊಡಿ. ಇಲ್ಲದಿದ್ದರೆ ಹಿಂದಕ್ಕೆ ಪಡೆಯಿರಿ ಎಂದು ಪಟ್ಟು ಹಿಡಿದರು.
ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಮಾತನಾಡಿ, ತೆಲಂಗಾಣದಲ್ಲಿ ಶೇ.50ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಿದ್ದಾರೆ. ನಾವು ಸಹ ತೆರಿಗೆ ಪಾವತಿಯಲ್ಲಿ ರಿಯಾಯಿತಿ ನೀಡಿ ಎಂದರು.
ಆನಂತರ, ಸಚಿವ ಬೈರತಿ ಬಸವರಾಜು, ಐದು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳ ಮಾಡದಿದ್ದರೆ ಗ್ರಾಂಟ್ ಬರುವುದಿಲ್ಲ. ಪುರಸಭೆ, ಪಟ್ಟಣ ಪಂಚಾಯ್ತಿಯಲ್ಲಿ ಸಂಗ್ರಹವಾದ ಹಣವನ್ನು ಆಯಾ ಸಂಸ್ಥೆಗಳ ಅಭಿವೃದ್ಧಿಗೆ ವ್ಯಯಿಸಲಾಗುತ್ತದೆ. ಹಾಗಾಗಿ ವಿಧೇಯಕಕ್ಕೆ ಒಪ್ಪಿಗೆ ನೀಡಬೇಕು ಎಂದರು.
ಸಚಿವ ಎಂ.ಟಿ.ಬಿ.ನಾಗರಾಜ್ ಅವರು, ಈ ವಿಧೇಯಕಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಿ ಎಂದು ಮನವಿ ಮಾಡಿದಾಗ ಸಭಾಧ್ಯಕ್ಷ ಪ್ರಾಣೇಶ್ ಅವರು ವಿಧೇಯಕವನ್ನು ಅಂಗೀಕರಿಸುವ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಕೆಲವು ಜೆಡಿಎಸ್ ಸದಸ್ಯರು ಅವರನ್ನು ಅನುಸರಿಸಿದರೆ ಮತ್ತೆ ಕೆಲ ಸದಸ್ಯರು ಸದನದಲ್ಲೇ ಹಾಜರಿದ್ದು, ಮೌನವಾಗಿದ್ದರು. ಈ ಹಂತದಲ್ಲಿ ಧ್ವನಿ ಮತದ ಒಪ್ಪಿಗೆ ದೊರೆಯಿತು.
ಜಿಎಸ್ಟಿ ಹಣ ಬಂತಾ?
ಎಲ್ಲದಕ್ಕೂ ಕೇಂದ್ರದ ಕಡೆ ಬೆರಳು ಮಾಡುತ್ತೀರಾ? ನಾವು ಬಿಲ್ ಪಾಸ್ ಮಾಡದೇ ಇದ್ದಲ್ಲಿ ಕೇಂದ್ರದಿಂದ ಬರುವ ಅನುದಾನ ಬರಲ್ಲ ಎನ್ನುತ್ತೀರಾ, ಹಾಗಾದರೆ ಜಿಎಸ್ಟಿ ಹಣ ಬಂತಾ ಎಂದು ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ, ಸರಕಾರವನ್ನು ಖಾರವಾಗಿ ಪ್ರಶ್ನಿಸಿದರು.
ನಂತರ ಚರ್ಚೆಗೆ ಉತ್ತರ ನೀಡಿದ ಸಚಿವ ಬಿ.ಎ.ಬಸವರಾಜ್, ಈ ಹಿಂದೆ ಮೂರು ವರ್ಷಕ್ಕೆ ಶೇ.15 ರಷ್ಟು ತೆರಿಗೆ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ, ಈಗ ಪ್ರತಿ ವರ್ಷ ಶೇ.3 ರಷ್ಟು ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದೇ ಬಾರಿ ಹೆಚ್ಚು ಹೊರೆ ಹಾಕುವ ಬದಲು ಪ್ರತಿ ವರ್ಷ ಹಂತ ಹಂತವಾಗಿ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ ಇದರಿಂದ ಜನರಿಗೆ ತೊಂದರೆಯಾಗುವುದಿಲ್ಲ. ಹಾಗಾಗಿ ವಿಧೇಯಕವನ್ನು ಅಂಗೀಕರಿಸಬೇಕೆಂದು ಮನವಿ ಮಾಡಿದರು.
'ರಾಜ್ಯಪಾಲರ ಭಾಷಣ ದೊಡ್ಡದೋ? '
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾಪದ ಮೇಲೆ ಚರ್ಚೆ ಕೈಗೆತ್ತಿಕೊಳ್ಳುವ ಮುನ್ನ ವಿಧೇಯಕಗಳನ್ನು ಮಂಡಿಸಲು ಅವಕಾಶ ನೀಡಿದ್ದಕ್ಕೆ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣದ ಮೇಲೆ ನಾವು ಮಾತನಾಡೋದು ಯಾವಾಗ, ಈಗಾಗಲೇ 10 ದಿನ ಆಗಿದೆ. ರಾಜ್ಯಪಾಲರು ದೊಡ್ಡವರೋ, ವಿಧೇಯಕ ದೊಡ್ಡದೋ, ರಾಜ್ಯಪಾಲರ ಭಾಷಣ ಅಂಗೀಕರಿಸಿದ ನಂತರ ಬಿಲ್ ತೆಗೆದುಕೊಳ್ಳಬಹುದಲ್ಲ ಎಂದು ಪ್ರಶ್ನಿಸಿದರು.






.jpg)

