ಪೆಟ್ರೋಲ್, ಡೀಸಲ್, ಎಲ್.ಪಿ.ಜಿ. ದರ ಏರಿಕೆ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ: ಕೆ. ಎನ್. ರವೀಂದ್ರಕುಮಾರ್

ಪಾಂಡವಪುರ: ಪೆಟ್ರೋಲ್, ಡೀಸಲ್, ಎಲ್.ಪಿ.ಜಿ ಸಿಲಿಂಡರ್ ದರ ಏರಿಕೆ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸವಿತಾ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಕೆ. ಎನ್. ರವೀಂದ್ರಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಗತ್ಯವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದೆ ಎಂದರು.
ಎಲ್.ಪಿ.ಜಿ ಸಿಲಿಂಡರ್ ದರವನ್ನು100 ರೂ. ಏರಿಕೆ ಮಾಡಲಾಗಿದೆ. ಕಳೆದ ಆರು ತಿಂಗಳಿಂದ ಸಬ್ಸಿಡಿಯನ್ನು ನಿಲ್ಲಿಸಿದ್ದಾರೆ. ಈಗಾಗಲೇ ಕೋವಿಡ್ ಸಂಕಷ್ಟದಿಂದ ಜನರು ಸಾಕಷ್ಟು ಕೆಲಸವಿಲ್ಲದೆ ನಷ್ಟ ಅನುಭವಿಸಿದ್ದು, ಬೆಲೆ ಏರಿಕೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಕಿಡಿಕಾರಿದರು.
ಒಂದು ತಿಂಗಳು ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಭಾರಿ ಏರಿಕೆಯಾಗಿದೆ. ಇದರಿಂದ ವಾಹನ ಸವಾರರು, ಲಾರಿ ಬಸ್ಸು ಟ್ಯಾಕ್ಸಿ ಮಾಲಕರಿಗೆ ಬಿಸಿ ತಟ್ಟಿದೆ. ರೈತರು ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೂ ವೃತಿರಿಕ್ತ ಪರಿಣಾಮ ಉಂಟಾಗಿ ಹಣದುಬ್ಬರಕ್ಕೆ ಕಾರಣವಾಗಿದೆ ಎಂದರು.
ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಎರಡು ತಿಂಗಳಿಂದ ದೇಶಾದ್ಯಂತ ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಅವರು ಆಕ್ರೂಶ ವ್ಯಕ್ತಪಡಿಸಿದರು.







