ಕಟ್ಟಕಡೆಯ ವ್ಯಕ್ತಿಗೂ ಸಹಕಾರಿ ಕ್ಷೇತ್ರದ ಸೌಲಭ್ಯ ದೊರೆಯಲಿ: ಈಶ್ವರಹಳ್ಳಿ ಮಹೇಶ್

ಚಿಕ್ಕಮಗಳೂರು, ಫೆ.8: ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಸಮಾಜಮುಖಿಯಾಗಿ ಕಟ್ಟಕಡೆಯ ವ್ಯಕ್ತಿಗೂ ಸಾಲ-ಸೌಲಭ್ಯಗಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪಿ.ಸಿ.ಎ.ಎಲ್.ಡಿ ಬ್ಯಾಂಕ್‍ನ ರಾಜ್ಯ ನಿರ್ದೇಶಕ ಈಶ್ವರಹಳ್ಳಿ ಮಹೇಶ್ ಹೇಳಿದರು.
ಸೋಮವಾರ ನಗರದ ಗೃಹಮಂಡಳಿ ಬಡಾವಣೆಯ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಯೂನಿಯನ್, ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಶಾಖೆಗಳ ಸಹಯೋಗದಲ್ಲಿ ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಆಡಳಿತ ನಿರ್ವಹಣೆ ಮತ್ತು ಕಾರ್ಯದಕ್ಷತೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರ್ರಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಲು ತರಬೇತಿ ಕಾರ್ಯಾಗಾರಗಳು ಅತ್ಯಂತ ಉಪಯುಕ್ತವಾಗಿದ್ದು ಸಹಕಾರ ಕ್ಷೇತ್ರದ ಎಲ್ಲಾ ಅಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕರು, ಅಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ ಅವರು ಬ್ಯಾಂಕುಗಳು ಸಾರ್ವಜನಿಕರಿಗೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಸಹಕಾರಿ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ಕ್ಷೇತ್ರ ಕಾಯ್ದೆ ಜೊತೆಗೆ ಗ್ರಾಮಸ್ವರಾಜ್ಯ ಕಾಯ್ದೆಗಳಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳಬೇಕು, ಅರ್ಹ ರೈತ ಫಲಾನುಭವಿಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಅದರಂತೆಯೇ ಶೇ.100 ರಷ್ಟು ಸಾಲ ಮರುಪಾವತಿ ಮಾಡಿಕೊಳ್ಳಬೇಕು. ಇದರಿಂದಾಗಿ ರೈತರರು, ಬ್ಯಾಂಕುಗಳ ಏಳಿಗೆಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಲೋಕಪ್ಪಗೌಡ ಮಾತನಾಡಿ, ಸಹಕಾರಿ ಕ್ಷೇತ್ರಗಳಲ್ಲಿ ಸಂಘ-ಸಂಸ್ಥೆಗಳನ್ನು ಕಟ್ಟಿ ಸಾಲ-ಸೌಲಭ್ಯಗಳನ್ನು ನೀಡುವುದರಿಂದ ಆರ್ಥಿಕವಾಗಿ ಅನುಕೂಲವಾಗಲಿದೆ, ರೈತರು ಸೇರಿದಂತೆ ಸಂಘ-ಸಂಸ್ಥೆಗಳಿಗೆ ಸೂಕ್ತ ಸಾಲ-ಸೌಲಭ್ಯ ಒದಗಿಸುವ ಹೊಣೆಗಾರಿಕೆ ನಮ್ಮ ಮೇಲಿದ್ದು ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥಾಪಕರು ಹಾಗೂ ಅಧಿಕಾರಿ ವರ್ಗ ದಕ್ಷಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಮಹಾಬಲ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷ ಜಿ.ಕೆ. ದಿವಾಕರ್, ನಿರ್ದೇಶಕರಾದ ವರಸಿದ್ದಿ ವೇಣುಗೋಪಾಲ್, ಬಿ.ಟಿ ರಾಮಚಂದ್ರ, ಇತೀಶ್, ಲೆಕ್ಕಪರಿಶೋಧಕ ಸಿದ್ದಲಿಂಗೇಶ್ವರ, ಜಿಲ್ಲಾ ಸಹಕಾರ ಬ್ಯಾಂಕ್ ಸಿಇಒ ಎಚ್.ಡಿ ಮಂಜುನಾಥ್, ಪಿಕಾರ್ಡ್ ಬ್ಯಾಂಕ್ ವ್ಯವಸ್ಥಾಪಕ ಸೋಮಸುಂದರ್, ಉಪನಿಬಂಧಕ ದಯಾನಂದ್ ಉಪಸ್ಥಿತರಿದ್ದರು.







