ಎಲ್ಗರ್ ಪರಿಷದ್ ಪ್ರಕರಣ: ನವ್ಲಾಖಾ ಜಾಮೀನು ಅರ್ಜಿ ತಿರಸ್ಕೃತ
ಮುಂಬೈ, ಫೆ.8: ಎಲ್ಗರ್ ಪರಿಷದ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಗೌತಮ್ ನವ್ಲಾಖಾರ ಜಾಮೀನು ಅರ್ಜಿ (ಶಾಸನಬದ್ಧ ಜಾಮೀನು)ಯನ್ನು ವಜಾಗೊಳಿಸಿದ್ದ ಎನ್‌ಐಯ ಕೋರ್ಟ್‌ನ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಎನ್‌ಐಎ ನ್ಯಾಯಾಲಯ ನೀಡಿದ ಆದೇಶವನ್ನು ಪರಿಶೀಲಿಸಿದ್ದು, ಇದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಮನವರಿಕೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್‌ಎಸ್ ಶಿಂಧೆ ಹಾಗೂ ಎಂಎಸ್ ಕಾರ್ಣಿಕ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಎನ್‌ಐಎ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸಂದರ್ಭ ನವಲಖ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ ‘ನವ್ಲಾಖಾ ಗೃಹ ಬಂಧನದ ಅವಧಿಯಲ್ಲೂ ಕಸ್ಟಡಿಯಲ್ಲೇ ಇದ್ದರು. ಆಗ ಅವರ ಚಲನವಲನ ಹಾಗೂ ಸ್ವಾತಂತ್ರವನ್ನು ನಿಬರ್ಂಧಿಸಲಾಗಿತ್ತು. ನವ್ಲಾಖಾ 2020ರ ಎಪ್ರಿಲ್ 14ರಂದು ನ್ಯಾಯಾಲಯಕ್ಕೆ ಶರಣಾಗಿದ್ದರು. ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸಲು ಎನ್‌ಐಎ 2020ರ ಜೂನ್ 29ರಂದು ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ, ಗೃಹ ಬಂಧನದ 34 ದಿನಗಳನ್ನೂ ಪರಿಗಣಿಸಿದರೆ, ಎನ್‌ಐಎ 93 ದಿನದ ಬಳಿಕ ಕಸ್ಟಡಿ ವಿಸ್ತರಣೆ ಕೋರಿದೆ. ಆದ್ದರಿಂದ ನವ್ಲಾಖಾ ಶಾನಸಬದ್ಧ ಜಾಮೀನು ಪಡೆಯಲು ಅರ್ಹರು’ ಎಂದು ಹೇಳಿದರು.
ಆದರೆ ಗೃಹಬಂಧನದ ಅವಧಿಯನ್ನು ಕಸ್ಟಡಿ ಅವಧಿ ಎಂದು ಪರಿಗಣಿಸಬಾರದು ಎಂದು ಎನ್‌ಐಎ ಪರ ವಕೀಲರು ವಾದಿಸಿದರು.







