ಉತ್ತರಾಖಂಡ ಹಿಮ ಪ್ರವಾಹ: ಋಷಿಗಂಗಾ ಯೋಜನಾ ನಿವೇಶನದಲ್ಲಿ ಮೂರು ಮೃತದೇಹಗಳು ಪತ್ತೆ

ಜೋಷಿಮಠ, ಫೆ. 9: ಜೋಷಿಮಠದ ರೈನಿ ಗ್ರಾಮದ ಋಷಿಗಂಗಾ ವಿದ್ಯುತ್ ಯೋಜನೆ ನಿವೇಶನದ ಸಮೀಪ ಮತ್ತೆ ಮೂರು ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ. ಹಿಮ ಪ್ರವಾಹ ಸಂಭವಿಸಿದ ಸಂದರ್ಭ ಘಟಕದಲ್ಲಿ ಕರ್ತವ್ಯದಲ್ಲಿದ್ದ 44 ಜನರ ಪಟ್ಟಿಯನ್ನು ನಿವೇಶನದಲ್ಲಿ ಯೋಜನೆ ನಡೆಸುತ್ತಿರುವ ಕುಂದನ್ ಸಮೂಹ ತಮಗೆ ನೀಡಿದೆ.
ರವಿವಾರ ಬೆಳಗ್ಗೆ ಘಟನೆ ನಡೆಯುವ ಸಂದರ್ಭ ಇಬ್ಬರು ಪೊಲೀಸರು ಕೂಡ ನಿವೇಶನದಲ್ಲಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, 70ಕ್ಕೂ ಅಧಿಕ ಜನರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ‘‘ಸಮೀಪದ ಗ್ರಾಮದಿಂದ ಸುಮಾರು 80 ಜನರು ನಾಪತ್ತೆಯಾಗಿದ್ದಾರೆ.
‘‘ನೀರು ಹಾಗೂ ಕೆಸರಿನ ಪ್ರವಾಹ ಒಮ್ಮೆಲೆ ಅಪ್ಪಳಿಸಿದಾಗ ನಮಗೆ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ’’ ಎಂದು ರೈನಿ ಗ್ರಾಮದ ಪ್ರಧಾನ ಭವನ್ ರಾಣಾ ಹೇಳಿದ್ದಾರೆ. ರಸ್ತೆಗಳಲ್ಲಿ ತುಂಬಿರುವ ಅವಶೇಷಗಳನ್ನು ತೆರವುಗೊಳಿಸುವ ಹಾಗೂ ನಾಪತ್ತೆಯಾದವರನ್ನು ಪತ್ತೆ ಮಾಡುವ ಕಾರ್ಯಾಚರಣೆ ಕನಿಷ್ಠ ಒಂದು ವಾರಗಳ ಕಾಲ ನಡೆಯಲಿದೆ ಎಂದು ಎನ್‌ಡಿಆರ್‌ಎಫ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಬಿಆರ್‌ಒ, ರಾಜ್ಯ ಹಾಗೂ ರಾಷ್ಟ್ರ ವಿಪತ್ತು ಪರಿಹಾರ ಪಡೆಗಳು, ಪೊಲೀಸರು ನೆರವು ನೀಡುತ್ತಿದ್ದಾರೆ ಎಂದು ಎನ್‌ಡಿಆರ್‌ಎನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.







