ಟಿಕ್ರಿ, ಸಿಂಘು ಗಡಿಯಲ್ಲಿ ಇಬ್ಬರು ರೈತರ ಸಾವು

ಹೊಸದಿಲ್ಲಿ, ಫೆ. 9: ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹರ್ಯಾಣದ ಇಬ್ಬರು ರೈತರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಘ ಗಡಿಯ ಪ್ರತಿಭಟನಾ ಸ್ಥಳದ ಸಮೀಪ ಮಂಗಳವಾರ ಬೆಳಗ್ಗೆ ಪಾಣಿಪತ್ ನ ಸಿವಾಹ್ ಗ್ರಾಮದ 50 ವರ್ಷದ ಹರೀಂದರ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
‘‘ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ. ಆದರೂ ಸಾವಿನ ಖಚಿತ ಕಾರಣ ತಿಳಿಯಬೇಕಾದರೆ ಮರಣೋತ್ತರ ಪರೀಕ್ಷೆಯ ವರದಿ ಸಿಗಬೇಕು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲದೆ, ಟಿಕ್ರಿ ಗಡಿಯ ಪ್ರತಿಭಟನಾ ಸ್ಥಳದಲ್ಲಿ ಸ್ವಯಂ ಸೇವೆ ನೀಡುತ್ತಿದ್ದ ಹರ್ಯಾಣದ ರೋಹ್ಟಕ್ ಜಿಲ್ಲೆಯ 28 ವರ್ಷದ ರೈತ ಟ್ರ್ಯಾಕ್ಟರ್-ಟ್ರಾಲಿಯಿಂದ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ರೋಹ್ಟಕ್‌ನ ಪಿಜಿಐಎಂಎಸ್‌ನಲ್ಲಿ ದಾಖಲಾಗಿದ್ದ ರೈತ ದೀಪಕ್ ಅವರು ಸೋಮವಾರ ಮೃತಪಟ್ಟಿದ್ದಾರೆ ಎಂದು ಝಝ್ಝಾರ್ ಜಿಲ್ಲೆಯ ಆಸೋಡಾ ಪೊಲೀಸ್ ಠಾಣೆಯ ಅಧಿಕಾರಿ ಕುಲದೀಪ್ ಸಿಂಗ್ ತಿಳಿಸಿದ್ದಾರೆ. ಬಹಾದ್ದೂರ್‌ಗಢ ಬೈಪಾಲ್ ರಸ್ತೆಯಲ್ಲಿ ಫೆಬ್ರವರಿ 5ರಂದು ಅಪಘಾತ ಸಂಭವಿಸಿತ್ತು ಎಂದು ಅವರು ಹೇಳಿದ್ದಾರೆ. ಟಿಕ್ರಿ ಗಡಿಯಲ್ಲಿ ದೀಪಕ್ ಅವರು ಟ್ರ್ಯಾಕ್ಟರ್-ಟ್ರಾಲಿಯಲ್ಲಿ ಕುಳಿತುಕೊಂಡು ಧರಣಿ ನಿರತ ರೈತರಿಗೆ ಪಡಿತರ ವಿತರಿಸುತ್ತಿದ್ದರು. ಈ ಸಂದರ್ಭ ಕೆಳಗೆ ಬಿದ್ದ ಅವರು ಗಂಭೀರ ಗಾಯಗೊಂಡಿದ್ದರು. ರೋಹ್ಟಕ್‌ನ ಪಿಜಿಐಎಂಎಸ್‌ನಲ್ಲಿ ಚಿಕಿತ್ಸೆ ಸಂದರ್ಭ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.







