ಎಫ್‌ಡಿಐ ಹೇಳಿಕೆಗೆ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡ ದಿಗ್ವಿಜಯ ಸಿಂಗ್

ಹೊಸದಿಲ್ಲಿ, ಫೆ. 9: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಒಕ್ಕೂಟಗಳಿಗೆ ಬೆಂಬಲ ವ್ಯಕ್ತಪಡಿಸಿ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳು ಮಾಡಿದ ಟ್ವೀಟ್ ಬಗ್ಗೆ ‘‘ವಿದೇಶಿ ವಿಧ್ವಂಸಕಾರಿ ಸಿದ್ಧಾಂತ’’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಟೀಕಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಟ್ಟಿಟ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಪರಿಚಯಿಸಿದ ಒಡೆದು ಆಳುವ ನೀತಿ’ಯಿಂದ ಮೋದಿ ಅವರು ‘‘ವಿದೇಶಿ ವಿಧ್ವಂಸಕಾರಿ ಸಿದ್ಧಾಂತ’’ವನ್ನು ಎರವಲು ಪಡೆದುಕೊಂಡಿದ್ದಾರೆ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
‘‘ಮೋದಿ ಜಿ ಅವರೇ, ನೀವು ಎಫ್‌ಡಿಐಯನ್ನು ವಿದೇಶಿ ವಿಧ್ವಂಸಕಾರಿ ಸಿದ್ಧಾಂತ ಎಂದು ವ್ಯಾಖ್ಯಾನಿಸಿದ್ದೀರಿ. ನೀವು ಹಾಗೂ ಸಂಘ ಪರಿವಾರ ಬ್ರಿಟಿಷರು ನಮಗೆ ನೀಡಿದ ಒಡೆದು ಆಳುವ ನೀತಿಯನ್ನು ಎರವಲು ಪಡೆದುಕೊಂಡು ಧರ್ಮದ ಹೆಸರಿನಲ್ಲಿ ವಿಭಜನೀಯ ನೀತಿಯ ಮೂಲಕ ದೇಶ ಆಳುತ್ತಿದ್ದೀರಿ. ಏಕತೆ ದೇಶದ ಶಕ್ತಿ’’ ಎಂದು ದಿಗ್ವಿಜಯ ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸೋಮವಾರ ರಾಜ್ಯ ಸಭೆಯಲ್ಲಿ ರಾಷ್ಟ್ರಪತಿ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭ ಪ್ರಧಾನಿ ಮೋದಿ ಅವರು, ಇಂದು ನಾವು ನೂತನ ಎಫ್‌ಡಿಐಯನ್ನು ಕೂಡ ಕಾಣಬಹುದು. ಅದು ವಿದೇಶಿ ವಿಧ್ವಂಸಕಾರಿ ಸಿದ್ಧಾಂತ. ಇದರ ಬಗ್ಗೆ ನಾವು ಎಚ್ಚರದಿಂದ ಇರಬೇಕು ಎಂದು ಹೇಳಿದ್ದರು.







