ಇಂಗ್ಲಿಷ್ ಇರಲಿ, ಕನ್ನಡದ ನಿರ್ಲಕ್ಷ್ಯ ಬೇಡ; ಪೊಳಲಿ ನಿತ್ಯಾನಂದ ಕಾರಂತ
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು, ಫೆ.9: ದಿನದಿಂದ ದಿನಕ್ಕೆ ಇಂಗ್ಲಿಷ್ ಬಗ್ಗೆ ವ್ಯಾಮೋಹ ಹೆಚ್ಚುತ್ತಿದೆ. ಇಂಗ್ಲಿಷ್ ಬೇಕು. ಆದರೆ ಕನ್ನಡವನ್ನು ನಿರ್ಲಕ್ಷಿಸಬಾರದು. ಕನ್ನಡ ಬರುವುದಿಲ್ಲ ಎಂಬುದು ಗೌರವದ ಸಂಕೇತ. ಮತ್ತು ಇಂಗ್ಲಿಷ್ ಬರುವುದಿಲ್ಲ ಎಂಬುದು ಅವಮಾನ ಎಂಬಂತಾಗಿದೆ ನಮ್ಮ ವ್ಯವಸ್ಥೆ ಎಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೊಳಲಿ ನಿತ್ಯಾನಂದ ಕಾರಂತ ಹೇಳಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡದ ಉದ್ದಾರ ಕನ್ನಡದವರಿಂದ ಆಗದೆ ಮೆಕ್ಸಿಕೋ, ನ್ಯೂಜಿಲ್ಯಾಂಡಿನವರಿಂದಾಗುವುದೇ? ಇತರ ಭಾಷಿಕರಲ್ಲಿ ಸಹಜವಾಗಿ ಕ್ರಿಯಾಶೀಲ ವಾಗಿರುವ ಸ್ವಭಾಷಾಭಿಮಾನ ಕನ್ನಡಿಗರಲ್ಲಿ ಇರಬೇಕಾದಷ್ಟು ಪ್ರಮಾಣದಲ್ಲಿಲ್ಲ. ತೆಲುಗು, ಮಲಯಾಳಂ, ತಮಿಳು ಭಾಷಿಕರು ಇಂಗ್ಲಿಷ್ ಕಲಿಯುತ್ತಾರೆ. ಆದರೆ ಅವರವರ ಮಾತೃಭಾಷೆಗೆ ವಿಶೇಷ ಒಲವು ಹರಿಸುತ್ತಾರೆ. ಆದರೆ ಕನ್ನಡಿಗರಾದ ನಾವು ಅದಕ್ಕೆ ತದ್ವಿರುದ್ಧವಾಗಿದೆ. ಇಂದು ಅನೇಕ ಕನ್ನಡ ಶಾಲೆಯನ್ನು ಮುಚ್ಚಲಾಗಿದೆ. ಕನ್ನಡ ಶಾಲೆಯು ಇಂಗ್ಲಿಷ್ ಶಾಲೆಯಾಗಿ ಪರಿವರ್ತನೆಗೊಂಡಿದೆ ಎಂದರು.
ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ಉಪಮಹಾಪ್ರಬಂಧಕ ವೀಣಾ ಶೆಟ್ಟಿ ಮಾತನಾಡಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು. ಅದಕ್ಕಾಗಿ ಹೆತ್ತವರು ಮತ್ತು ಶಿಕ್ಷಕ ವರ್ಗದ ಪಾತ್ರ ಅಪಾರ ಎಂದರು.
ಶಾಸಕ ಡಾ.ವೈ.ಭರತ್ ಶೆಟ್ಟಿ ಪುಸ್ತಕ ಪ್ರದರ್ಶನ ಮಳಿಗೆ ಉದ್ಘಾಟಿಸಿದರು. ಮೇಯರ್ ದಿವಾಕರ ಪಾಂಡೇಶ್ವರ್ ರಾಷ್ಟ್ರಧ್ವಜಾರೋಹಣಗೈದರು. ಮನಪಾ ಉಪ ಮೇಯರ್ ವೇದಾವತಿ ಕನ್ನಡ ಭುವನೇಶ್ವರಿ ದಿಬ್ಬಣ ಉದ್ಘಾಟಿಸಿದರು. ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಪರಿಷತ್‌ನ ಧ್ವಜಾರೋಹಣಗೈದು ಆಶಯ ಭಾಷಣಗೈದರು. ಕಾರ್ಪೊರೇಟರ್ ಸುನೀತಾ ಕನ್ನಡ ಧ್ವಜಾರೋಹಣಗೈದರು.
ಕೃಷ್ಣ ಪ್ರದೀಪ ಶೇಡಿಗುಡ್ಡೆ ಅವರ ಕಣಿಪುರದ ಕಂಪು, ಎಸ್.ಕೆ. ಗೋಪಾಲಕೃಷ್ಣ ಭಟ್ ಅವರ ‘ಆಶಾವಾದ’ ಕವನ ಸಂಕಲನವನ್ನು ಕೇಂದ್ರ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಪಿ.ಅನಂತ ಐತಾಳ ಅತಿಥಿಗಳಾಗಿದ್ದರು.
ಸುರತ್ಕಲ್ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಲೇಖಕ ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು.







