ಮೀಸಲಾತಿ ವಿಚಾರ: ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದಿಂದ ಸಿಎಂಗೆ ಮನವಿ
ಬೆಂಗಳೂರು, ಫೆ.9: ವೀರಶೈವ ಲಿಂಗಾಯತ ಸಮುದಾಯವು ಅನೇಕ ಒಳಪಂಗಡಗಳನ್ನು ಒಳಗೊಂಡಿದೆ. ಈ ಒಳಪಂಗಡಗಳಲ್ಲಿ ಅನೇಕ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅವರೆಲ್ಲರ ಪರಿಸ್ಥಿತಿ ದಯನೀಯವಾಗಿರುವುದು ಸತ್ಯ ಸಂಗತಿಯಾಗಿದೆ ಎಂದು ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮನವಿ ಸಲ್ಲಿಸಿದೆ.
ಮಂಗಳವಾರ ಮುಖ್ಯಮಂತ್ರಿಯ ಸರಕಾರಿ ನಿವಾಸ ಕಾವೇರಿಯಲ್ಲಿ ಅವರನ್ನು ಭೇಟಿಯಾದ ಮಠಾಧೀಶರ ನಿಯೋಗವು ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸುವ ಹಾಗೂ ಈಗಾಗಲೆ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಮತ್ತು ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಮೀಸಲಾತಿ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿತು.
ಲಿಂಗಾಯತರಲ್ಲಿ 106 ಒಳಪಂಗಡಗಳಿವೆ. ಇತರೆ ಹಿಂದುಳಿದ ಜಾತಿಗಳ ಅಡಿಯಲ್ಲಿ 32 ಒಳಪಂಗಡಗಳು ಸೇರಿವೆ. ಉಳಿದ 74 ಒಳಪಂಗಡಗಳಿಗೆ ಮೀಸಲಾತಿ ಸೌಲಭ್ಯವಿಲ್ಲ. ಆದುದರಿಂದ, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಈ ಎಲ್ಲ ಒಳಪಂಗಡದ ಜನರಿಗೆ ಮೀಸಲಾತಿ ಕಲ್ಪಿಸಿಕೊಡಬೇಕು ಎಂದು ಮಠಾಧೀಶರ ನಿಯೋಗವು ಮುಖ್ಯಮಂತ್ರಿಗೆ ಮನವಿ ಮಾಡಿತು.
ಅಲ್ಲದೆ, ಅಲಮಟ್ಟಿ ಜಲಾಶಯದ ಹಿನ್ನೀರಿನಿಂದಾಗಿ ಈ ಭಾಗದ ಅಸಂಖ್ಯಾತ ರೈತಾಪಿ ವರ್ಗ ಮನೆ, ಮಠ, ಜಮೀನುಗಳನ್ನು ಕಳೆದುಕೊಂಡು ಅತ್ಯಂತ ದಾರುಣ ಸ್ಥಿತಿಗೆ ತಲುಪಿರುವುದರಿಂದ ವಿಜಯಪುರ ಜಿಲ್ಲೆಯು ಬರದನಾಡು ಎಂಬ ಹಣೆಪಟ್ಟಿ ಕಳಚಿಕೊಳ್ಳುವ ನಿಟ್ಟಿನಲ್ಲಿ ಈ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಿ ಹಾಗೂ ಈ ಭಾಗದಲ್ಲಿ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜಿಲ್ಲೆಯ ರೈತಾಪಿ ವರ್ಗ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಮಠಾಧೀಶರ ನಿಯೋಗ ಕೋರಿಕೆ ಸಲ್ಲಿಸಿತು.







