ಮಕ್ಕಳು ಅಸಭ್ಯ ಸ್ಪರ್ಶ, ಸಭ್ಯ ಸ್ಪರ್ಶದ ವ್ಯತ್ಯಾಸ ತಿಳಿಯಬಲ್ಲರು: ಪೋಕ್ಸೊ ಕೋರ್ಟ್

ಮುಂಬೈ, ಫೆ.9: ಮಕ್ಕಳು ಕೂಡಾ ಅಸಭ್ಯ ಸ್ಪರ್ಶ ಮತ್ತು ಸಭ್ಯ ಸ್ಪರ್ಶದ ವ್ಯತ್ಯಾಸ ತಿಳಿಯಬಲ್ಲರು ಎಂದು ಹೇಳಿರುವ ಮುಂಬೈಯ ಪೋಕ್ಸೊ ನ್ಯಾಯಾಲಯ, 5 ವರ್ಷದ ಹುಡುಗಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜಾಮೀನು ನಿರಾಕರಿಸಿದೆ.
ಆರೋಪಿ ಹಾಗೂ ಬಾಲಕಿಯ ಮನೆ ಅಕ್ಕಪಕ್ಕದಲ್ಲಿದ್ದು ಆಟವಾಡಲು ಆರೋಪಿಯ ಮನೆಗೆ ಹೋಗಿದ್ದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯ ವಿರುದ್ಧ ‘ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಷುಯಲ್ ಅಫೆನ್ಸಸ್ ಆ್ಯಕ್ಟ್(ಪೋಕ್ಸೊ)’ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಜಾಮೀನು ಕೋರಿ ಆರೋಪಿ ಪೋಕ್ಸೊ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ಸಂದರ್ಭ ವಾದ ಮಂಡಿಸಿದ ಆರೋಪಿ ಪರ ವಕೀಲರು, ಸಂತ್ರಸ್ತೆ ಸಣ್ಣ ಹುಡುಗಿಯಾಗಿದ್ದು ಆಗಾಗ ಆರೋಪಿಯ ಮನೆಗೆ ಆಟವಾಡಲು ಹೋಗುತ್ತಿದ್ದಳು. ಬಾಲಕಿಯ ಹೇಳಿಕೆಯ ಆಧಾರದಲ್ಲಿ ಆರೋಪಿ ಅಸಭ್ಯವಾಗಿ ಸ್ಪರ್ಶಿಸಿರುವುದನ್ನು ಖಚಿತ ಪಡಿಸಲಾಗದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಂತ್ರಸ್ತೆ ಸಣ್ಣ ಹುಡುಗಿಯಾಗಿದ್ದರೂ ಸಭ್ಯ ಮತ್ತು ಅಸಭ್ಯ ಸ್ಪರ್ಶದ ವ್ಯತ್ಯಾಸ ತಿಳಿಯಬಲ್ಲರು. ಆರೋಪಿ ಬಾಲಕಿಯನ್ನು ಸ್ಪರ್ಶಿಸಿರುವುದನ್ನು ಸ್ವತಃ ಒಪ್ಪಿಕೊಂಡಿರುವುದರಿಂದ ಇದು ಪೋಕ್ಸೊ ಪ್ರಕರಣವಾಗಿದ್ದು ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶಿಸಿದ್ದಾರೆ.







