ಕಿರುಕುಳ ಕೊಡುವುದನ್ನು ಬಿಟ್ಟು ರೈತರ ಸಮಸ್ಯೆ ಬಗೆಹರಿಸಲಿ: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು,ಫೆ.9: ಪ್ರಧಾನಿ ನರೇಂದ್ರ ಮೋದಿ ಮೊದಲು ರೈತರ ಸಮಸ್ಯೆ ಬಗೆಹರಿಸಲಿ. ಅದು ಬಿಟ್ಟು ಏನೇನೊ ಕಾರಣ ಕೊಟ್ಟು ರೈತರಿಗೆ ಕಿರುಕುಳ ಕೊಡುವುದಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸುತ್ತೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಂದೋಲನ ಜೀವಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೋದಿ ಮೊದಲು ರೈತರ ಸಮಸ್ಯೆ ಬಗೆಹರಿಸಲಿ. ಏನೇನೋ ಕಾರಣ ಕೊಟ್ಟು ರೈತರಿಗೆ ಕಿರುಕುಳ ಕೊಡುವುದಲ್ಲ. ಈ ರೈತರ ಪ್ರತಿಭಟನೆ ವೇಳೆ ರಸ್ತೆಗೆ ಮೊಳೆ ಹೊಡೆದವರು, ಬ್ಯಾರಿಕೇಡ್ ಗಳನ್ನು ಅಡ್ಡ ಹಾಕಿದವರು ಮತ್ತು ಕಾಂಪೌಂಡ್ ಕಟ್ಟಿದವರು ಯಾರು, ಬಿಜೆಪಿ ಯವರಲ್ಲವೇ ? ಮೋದಿ ಅವರಲ್ಲವೇ. ಜಿಗುಟುವುದು ಇವರೇ, ತೊಟ್ಟಿಲು ತೂಗುವುದು ಇವರೇ ಎಂದು ಕಿಡಿಕಾರಿದರು.
ರೈತರು ಬಹಳ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರು ಕೇಳುತ್ತಿರುವುದು ಏನು, ಮೂರು ರೈತ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಿ ಎಂದು ಕೇಳುತ್ತಿದ್ದಾರೆ. ಅದನ್ನು ವಾಪಸ್ ಪಡೆದರೆ ಯಾರು ಪ್ರತಿಭಟನೆ ನಡೆಸುತ್ತಾರೆ ಎಂದರು.
ಸಂವಿಧಾನದಡಿಯಲ್ಲಿ ಯಾರ್ಯಾರು ಮೀಸಲಾತಿಗೆ ಅರ್ಹರಿದ್ದಾರೊ ಅವರೆಲ್ಲರಿಗೂ ಮೀಸಲಾತಿ ಕೊಡಬೇಕು. ನಾನು ಕುರುಬರ ಎಸ್ಟಿ ಮೀಸಲಾತಿ ವಿರೋಧಿಯಲ್ಲ. ಮೊದಲು ಕುಲಶಾಸ್ತ್ರ ಅಧ್ಯಯನ ಮಾಡಿ ನಂತರ ರಾಜ್ಯ ಸರ್ಕಾರ ಕೆಂದ್ರಕ್ಕೆ ಶಿಫಾರಸ್ಸು ಮಾಡಲಿ ಎಂದು ಹೇಳಿದ್ದೇನೆ. ಅದರಂತೆ ಮಾಡಿದರೆ ಸಂವಿಧಾನ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ತೀರ್ಮಾನ ಮಾಡಲಿ ಎಂದು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು, ಸುಪ್ರೀಂ ಕೋರ್ಟ್ ಈಗಾಗಲೇ ಮೀಸಲಾತಿ ಶೆ.50 ರಷ್ಟು ಮೀರಬಾರದು ಎಂದು ಹೇಳಿದೆ. ಅದರಂತೆ ಎಸ್ಟಿ ಗುಣಲಕ್ಷಣಗಳನ್ನು ಹೊಂದಿರುವ ಜಾತಿಗಳವರನ್ನು ನೋಡಿಕೊಂಡು ಮೀಸಲಾತಿ ಕೊಡಬೇಕು ಎಂದು ಹೇಳಿದರು.
ಸಾಮಾಜಿಕ ನ್ಯಾಯ ಸಿಗುವವರೆಗೂ ಅಹಿಂದ ಹೋರಾಟ ಅಗತ್ಯವಿದೆ. ಸಂವಿಧಾನ ಮೀಸಲಾತಿ ಕೊಟ್ಟಿದೆ. ಖಾಸಗೀಕರಣ ಮಾಡುವ ಮೂಲಕ ಮೀಸಲಾತಿ ಕಿತ್ತುಕೊಳ್ಳಲಾಗುತ್ತಿದೆ. ಖಾಸಗಿಕರಣ ಆದರೆ ಮೀಸಲಾತಿ ಎಲ್ಲಿರುತ್ತದೆ. ಸಂವಿಧಾನ ಮೀಸಲಾತಿ ಕೊಡಿ ಎಂದು ಹೇಳುತ್ತದೆ. ಮೋದಿ ಸರ್ಕಾರಕ್ಕೆ ಮೀಸಲಾತಿ ನಂಬಿಕೆ ಇಲ್ಲ. ಹಾಗಾಗಿ ಮೀಸಲಾತಿ ಕಿತ್ತುಕೊಳ್ಳುತ್ತಿದ್ದಾರೆ. ಅಹಿಂದ ಜನರಿಗೆ ಬಡವರಿಗೆ ಮತ್ತು ಎಲ್ಲಾ ಜಾತಿಯ ಬಡವರಿಗೆ ಅನ್ಯಾಯ ಆದಾಗ ನಾವು ಬೀದಿಗೆ ಇಳಿಯುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೆಡಿಎಸ್ ನವರಿಗೆ ಜಾತ್ಯಾತೀತದ ಮೇಲೆ ನಂಬಿಕೆ ಇಲ್ಲ. ಹಾಗಾಗಿಯೇ ಸಭಾಪತಿ ಆಯ್ಕೆ ವಿಚಾರದಲ್ಲಿ ಇಬ್ಬಂದಿತನ ತೋರಿಸಿದ್ದಾರೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ







