ಕೊರೋನ ಲಸಿಕೆ ಪಡೆಯುವುದು ಸ್ವಪ್ರೇರಿತ, ವಿಮೆ ರಕ್ಷಣೆ ಪಡೆಯುವ ಅವಕಾಶವಿಲ್ಲ: ಸರಕಾರ

ಹೊಸದಿಲ್ಲಿ, ಫೆ.9: ಕೊರೋನ ಸೋಂಕಿಗೆ ಲಸಿಕೆ ಪಡೆಯುವ ಪ್ರಕ್ರಿಯೆ ಸ್ವಯಂಪ್ರೇರಿತವಾಗಿದ್ದು ಲಸಿಕೆ ಪಡೆದ ಬಳಿಕ ಯಾವುದೇ ರೀತಿಯ ಅಡ್ಡಪರಿಣಾಮ ಅಥವಾ ವೈದ್ಯಕೀಯ ತೊಡಕು ಕಾಣಿಸಿಕೊಂಡರೆ ವಿಮೆ ರಕ್ಷಣೆ ಪಡೆಯುವ ಅವಕಾಶವಿಲ್ಲ ಎಂದು ಕೇಂದ್ರ ಸರಕಾರ ರಾಜ್ಯಸಭೆಯಲ್ಲಿ ಹೇಳಿದೆ.
ಫಲಾನುಭವಿಗಳು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯುತ್ತಾರೆ. ಅಲ್ಲದೆ ಲಸಿಕಾ ಕೇಂದ್ರದಲ್ಲಿ ಅಲರ್ಜಿಗೆ ನೀಡುವ ಔಷಧದ ಕಿಟ್ ಸಿದ್ಧವಾಗಿರುತ್ತದೆ. ಲಸಿಕೆ ಪಡೆದ ಬಳಿಕ 30 ನಿಮಿಷ ನಿಗಾ ವ್ಯವಸ್ಥೆಯಡಿ ಇಡಲಾಗುತ್ತದೆ. ಅಸ್ವಸ್ಥರಾದವರನ್ನು ಎಇಎಫ್‌ಐ ನಿರ್ವಹಣಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಈ ಕೇಂದ್ರದವರು ಶಿಫಾರಸು ಮಾಡಿದವರಿಗೆ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆದರೆ ವಿಮೆಯ ರಕ್ಷೆ ಪಡೆಯುವ ಅವಕಾಶವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿ ಚೌಬೆ ಹೇಳಿದ್ದಾರೆ.
ಕೊರೋನ ಲಸಿಕೆ ಪಡೆದವರು, ಪಡೆಯಲಿರುವವರು ಲಸಿಕೆ ಪಡೆದ ಬಳಿಕ ಅಡ್ಡ ಪರಿಣಾಮ ಉಂಟಾದರೆ ವಿಮೆಯ ರಕ್ಷೆಗೆ ಒಳಪಡುತ್ತಾರೆಯೇ ಎಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಫೆ.4ರವರೆಗೆ, ಲಸಿಕೆ ಪಡೆದವರಲ್ಲಿ 81 ಮಂದಿಯಲ್ಲಿ ಅಡ್ಡಪರಿಣಾಮ ಉಂಟಾಗಿದ್ದು ಇದು ಒಟ್ಟು ಪ್ರಕರಣಗಳ 0.096ಶೇ. ಮಾತ್ರವಾಗಿದೆ. ಇದರಲ್ಲಿ ಹೆಚ್ಚಿನವು ತಲೆನೋವು, ಜ್ವರ, ಆಯಾಸ, ನಿತ್ರಾಣ, ತಲೆಸುತ್ತುವುದು, ನೋವು ಮುಂತಾದ ಸೌಮ್ಯ ಲಕ್ಷಣಗಳಾಗಿದ್ದು ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.







