ಕೋವಿಡ್‌ನಿಂದ ಗುಣಮುಖರಾದವರಿಗೆ ಲಸಿಕೆ ನೀಡುವುದು ವ್ಯರ್ಥ: ವಿಜ್ಞಾನಿಗಳು

ಹೊಸದಿಲ್ಲಿ, ಫೆ. 9: ಭಾರತದಲ್ಲಿ 24 ದಿನಗಳಲ್ಲಿ 60 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಹಂತದ ಕೋವಿಡ್ ಲಸಿಕೆ ಅಭಿಯಾನವನ್ನು ಜನವರಿ 16ರಂದು ಉದ್ಘಾಟಿಸಿದರು. ಇದರಲ್ಲಿ ಕೋವಿಡ್ ಸೋಂಕಿಗೆ ಒಳಗಾದ ಹಾಗೂ ಗುಣಮುಖರಾದವರು ಕೂಡ ಸೇರಿದ್ದಾರೆ.
ಕೂತೂಹಲಕಾರಿ ವಿಷಯವೆಂದರೆ, ಕೋವಿಡ್‌ನಿಂದ ಈಗಾಗಲೇ ಗುಣಮುಖರಾದ ವ್ಯಕ್ತಿಗಳಿಗೆ ಲಸಿಕೆ ನೀಡುವುದು ವ್ಯರ್ಥ ಕಾರ್ಯ. ಯಾಕೆಂದರೆ, ಪ್ರತಿಕಾಯಗಳು ಸಹಜವಾಗಿ ಅಭಿವೃದ್ಧಿಯಾಗುವುದು ಉತ್ತಮ ಹಾಗೂ ಇದು ಲಸಿಕೆಯ ನೆರವಿನಿಂದ ಅಭಿವೃದ್ಧಿಯಾಗುವ ಪ್ರತಿಕಾಯಕ್ಕಿಂತ ದೀರ್ಘಾವಧಿಯಾದುದು ಎಂದು ಆರೋಗ್ಯ ತಜ್ಞರು ಹಾಗೂ ವೈರಾಣು ತಜ್ಞರು ಹೇಳಿದ್ದಾರೆ.
ಕೋವಿಡ್ ಲಸಿಕೆಯನ್ನು ಹೆಚ್ಚು ಅಗತ್ಯ ಇರುವವರಿಗೆ ಸಂರಕ್ಷಿಸಿ ಇರಿಸಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಎರಡು ಮೂಲಭೂತ ವೈಜ್ಞಾನಿಕ ಅವಲೋಕನದ ಮೇಲೆ ಅವರು ಈ ವಾದ ಮುಂದಿರಿಸಿದ್ದಾರೆ. ಮೊದಲನೆಯದಾಗಿ ಜಗತ್ತಿನಾದ್ಯಂತ ಕೆಲವೇ ಕೋವಿಡ್ ಮರು ಸೋಂಕಿನ ಪ್ರಕರಣಗಳು ವರದಿಯಾಗಿವೆ. ಎರಡನೆಯದಾಗಿ ಸಿಡುಬು ಹಾಗೂ ಶೀತ ಜ್ವರದಂತಹ ಕೆಲವು ಶ್ವಾಸೋಚ್ವಾಸದ ವೈರಾಣು ರೋಗಗಳಿಗೆ ಲಸಿಕೆಯಿಂದ ಸಿಗುವ ಕೃತಕ ಪ್ರತಿಕಾಯಗಳಿಗಿಂತ ಸಹಜವಾಗಿ ಸಿಗುವ ಪ್ರತಿಕಾಯಗಳು ದೀರ್ಘ ಕಾಲ ರಕ್ಷಣೆ ನೀಡುತ್ತವೆ ಎಂಬ ಸಲಹೆಗೆ ಸಂಬಂಧಿಸಿದ ವೈಜ್ಞಾನಿಕ ಪುರಾವೆಗಳು.
ಜಗತ್ತಿನಲ್ಲಿ ಕೋವಿಡ್ ಮರು ಸೋಂಕಿನ ಒಟ್ಟು 44 ಪ್ರಕರಣಗಳು ಮಾತ್ರ ವರದಿಯಾಗಿದೆ. ಸಹಜವಾಗಿ ಸಿಗುವ ಪ್ರತಿಕಾಯಗಳು ದೀರ್ಘಾವಧಿಯ ರಕ್ಷಣೆ ನೀಡುತ್ತದೆ ಎಂದು ಖ್ಯಾತ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ. ಜಯಪ್ರಕಾಶ್ ಮುಲಿಯಿಲ್ ಹೇಳಿದ್ದಾರೆ. ‘‘ಸಿಡುಬಿನಂತಹ ರೋಗಗಳ ಸಂದರ್ಭ ಉತ್ಪತ್ತಿಯಾಗುವ ಸಹಜ ಪ್ರತಿಕಾಯಗಳು ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ನೀಡುತ್ತದೆ. ಆದರೆ, ಲಸಿಕೆಗಳು ಇದೇ ರೀತಿಯ ರೋಗ ನಿರೋಧಕ ಶಕ್ತಿ ನೀಡಲಾರವು’’ ಎಂದು ಅವರು ತಿಳಿಸಿದ್ದಾರೆ.







