ಗ್ರೀನ್ ಬಡ್ಸ್ ಆಗ್ರೋ ಕಂಪನಿ ವಿರುದ್ಧ ಠೇವಣಿದಾರರಿಂದ ಅಹೋರಾತ್ರಿ ಧರಣಿ

ಮೈಸೂರು,ಫೆ.9: ಗ್ರೀನ್ ಬಡ್ಸ್ ಅಗ್ರೋ ಕಂಪನಿಯಿಂದ ವಂಚನೆಗೆ ಒಳಗಾದ ಠೇವಣಿದಾರಿಂದ ಎರಡನೇ ದಿನವಾದ ಇಂದು ಅಹೋರಾತ್ರಿ ಧರಣಿ ಮುಂದುವರಿದಿದ್ದು, ಮಹಿಳೆಯರು ರಸ್ತೆಯಲ್ಲೇ ಉರುಳು ಸೇವೆ ಮಾಡಿದರು.
ಮಹಿಳೆಯರನ್ನು ಇಡೀ ರಾತ್ರಿ ರಸ್ತೆಯಲ್ಲಿ ಬಿಟ್ಟು ನಿರ್ಲಕ್ಷ್ಯ ಮಾಡಿದ ಮಹಿಳಾ ಜಿಲ್ಲಾಧಿಕಾರಿಗೆ ಧಿಕ್ಕಾರ. ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಾ ಉರುಳು ಸೇವೆ ಮಾಡಿದರು. ಇದೇ ವೇಳೆ ಬಳ್ಳಾರಿಯ ಕೂಡ್ಲಿಗಿ ಪೀರ್ ಸಾಬ್ ವಿಷವನ್ನು ಕುಡಿದು ಸಾಯುವುದಾಗಿ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲ್ ಕಿತ್ತುಕೊಂಡರು. ನಂತರ ಅವರನ್ನು ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಯಿತು.
ರೈತಮುಖಂಡ ಕುರುಬೂರು ಶಾಂತಕುಮಾರ್ ಧರಣಿ ನಿರತರಿಗೆ ಸಮಾಧಾನ ಹೇಳಿ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಯತ್ನಿಸಬಾರದು. ಹೋರಾಟದಿಂದಲೇ ಎಲ್ಲವನ್ನು ಗೆಲ್ಲಬೇಕು ಎಂದು ತಿಳಿ ಹೇಳಿದರು.
ದೆಹಲಿಯಲ್ಲಿ ರೈತರು 75 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಳ್ಮೆ ಕಳೆದುಕೊಂಡಿಲ್ಲ ಎಂಬುದನ್ನು ನಾವೆಲ್ಲ ಗಮನಿಸಬೇಕು. ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ 1,80,000 ಬಡ ಜನರಿಗೆ ವಂಚನೆ ಆಗಿರುವಾಗ, 20 ಜನ ಆತ್ಮಹತ್ಯೆ ಮಾಡಿಕೊಂಡಿರುವಾಗ ಜಿಲ್ಲಾಡಳಿತ ಲಘುವಾಗಿ ವರ್ತಿಸಬಾರದು. ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಎಚ್ಚರಿಸಿದರು.
ಸಿಓಡಿ ತನಿಖೆ ನಡೆದು ಸುಮಾರು 200 ಕೋಟಿಯಸ್ಟು ಗ್ರೀನ್ ಬಡ್ಸ್ ಸಂಸ್ಥೆ ವಂಚನೆ ಮಾಡಿದ್ದಾರೆ ಎಂದು ಸಾಬೀತಾಗಿ ಕಂಪನಿಯ ಆಸ್ತಿಗಳನ್ನು ಸರ್ಕಾರದ ಆದೇಶದ ಮೇರೆಗೆ ಮುಟ್ಟುಗೋಲು ಹಾಕಿಕೊಂಡು ಈ ಆಸ್ತಿಪಾಸ್ತಿಗಳನ್ನು ಹರಾಜು ಮಾಡಿ ಬಂದ ಹಣದಿಂದ ಠೇವಣಿದಾರರಿಗೆ ಪಾವತಿಸಬೇಕೆಂದು ಸೂಚನೆ ನೀಡಿದ್ದರೂ ನ್ಯಾಯಾಲಯಕ್ಕೆ ದಾಖಲಾತಿ ಸಲ್ಲಿಸಲು ವಿಳಂಬ ಮಾಡುತ್ತಿದ್ದಾರೆ. ಪ್ರಕರಣ ದಾಖಲಾಗಿ 8 ವರ್ಷಗಳೇ ಕಳೆದಿದೆ. ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಒತ್ತಾಯ ಮಾಡುತ್ತಿದ್ದರೂ ಸಮಸ್ಯೆ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿ ಕುಂಟು ನೆಪಗಳನ್ನು ಹೇಳಿಕೊಂಡು ವಿಳಂಬ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ವಂಚನೆಗೊಳಗಾದ 20ಕ್ಕೂ ಹೆಚ್ಚು ಜನ ರೈತ ಮತ್ತು ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣ ಗಂಭೀರ ಸ್ವರೂಪವಾಗಿದ್ದರೂ ಯಾವುದೇ ತುರ್ತು ಕ್ರಮ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಖಚಿತ ಭರವಸೆ ನೀಡುವ ತನಕ ಚಳುವಳಿ ಕೈಬಿಡುವುದಿಲ್ಲ ಎಂದು ತಿಳಿಸಿದರು.
ಗ್ರೀನ್ ಬಡ್ಸ್ ಠೇವಣಿದಾರರ ಸಂಘದ ರಾಜ್ಯ ಅಧ್ಯಕ್ಷೆ ಲಕ್ಷ್ಮೀದೇವಿ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ರೈತ ಮುಖಂಡ ಹತ್ತಳ್ಳಿ ದೇವರಾಜ್, ಬಳ್ಳಾರಿ ಮಂಜುನಾಥ್, ಷಡಕ್ಷರಿ ಸಂತೋಷ್, ಜಗದೀಶ್, ಮಹಿಳೆಯರು ಹಾಗೂ ಇತರೆ ಠೇವಣಿದಾರರು ಭಾಗವಹಿಸಿದ್ದರು.







