ಲಿಂಗಾಯತ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಿಲ್ಲ: ಸಚಿವ ನಿರಾಣಿ ಸ್ಪಷ್ಟನೆ

ಬೆಂಗಳೂರು, ಫೆ. 10: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಹೋರಾಟ ನಡೆಸುತ್ತಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರು ಯಾವುದೇ ಸಂದರ್ಭದಲ್ಲಿಯೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕೂಡಲಸಂಗಮ, ಹರಿಹರ ಪೀಠದ ಶ್ರೀಗಳು ಹೋರಾಟ ನಡೆಸುತ್ತಿದ್ದಾರೆ. ಕೂಡಲಸಂಗಮದಿಂದ ತುಮಕೂರುವರೆಗೆ ಬಂದಿದ್ದಾರೆ. ಕೃಷಿಯನ್ನೇ ಅವಲಂಬಿಸಿರುವ ಪಂಚಮಸಾಲಿ ಸಮುದಾಯದಲ್ಲಿ ಕಡುಬಡವರೇ ಹೆಚ್ಚಿದ್ದಾರೆ. ಈ ಸಮುದಾಯ ಶೈಕ್ಷಣಿಕವಾಗಿಯೂ ಹಿಂದುಳಿದಿದೆ ಎಂದು ಹೇಳಿದರು.
ಈ ಹಿಂದೆಯೇ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಆಗ್ರಹಿಸಿತ್ತು. ಆದರೆ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ 3ಬಿ ಅಡಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದು, ಅಂದಿನ ಸಿಎಂ ಯಡಿಯೂರಪ್ಪನವರೇ ಎಂದು ಸ್ಮರಿಸಿದ ಅವರು, ಇದೀಗ ಶಾಂತಿಯುತ ಹೋರಾಟ ನಡೆಯುತ್ತಿದೆ, ನಾವು ತುಮಕೂರಿಗೆ ಭೇಟಿ ನೀಡುತ್ತೇವೆ ಹಾಗೂ ಶ್ರೀಗಳಿಗೆ ಮನವಿ ಮಾಡುತ್ತೇವೆ. ಯಾರೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಿಲ್ಲ ಎಂದರು.





