ಸಮುದಾಯಗಳಿಗೆ ನೋವಾಗುವಂತೆ ಮಾತನಾಡುವುದು ಸಲ್ಲದು : ಯುಟಿ ಖಾದರ್
ಮಂಗಳೂರು, ಫೆ.10: ಯಾವುದೇ ಸಮುದಾಯಗಳಿಗೆ ನೋವಾಗುವಂತೆ ಮಾತನಾಡಬಾರದು. ಇಂತಹವನ್ನು ಸಹಿಸಲಸಾಧ್ಯ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಅಧಿಕಾರಿ ಆಡಿದ ಮಾತುಗಳು ಕೋಟಿ-ಚೆನ್ನಯ, ಜನಾರ್ದನ ಪೂಜಾರಿ, ಬಿಲ್ಲವರಿಗೆ ದುಃಖ ತಂದಿದೆ. ಹಿರಿಯರಾದ ಅವರು ಅಂಥ ಮಾತುಗಳನ್ನಾಡಬಾರದಿತ್ತು. ಅಧಿಕಾರಿ ಸಹಿತ ನಾವೆಲ್ಲರೂ ಪೂಜಾರಿಯವರ ಗರಡಿಯಲ್ಲೇ ಬೆಳೆದವರು. ಅವರು ಪಕ್ಷ ಬಿಟ್ಟು ಹೋದರೆ, ನಾವು ಈಗಲೂ ಇದ್ದೇವೆ. ಮುಂದಕ್ಕೆ ಯಾರೊಬ್ಬರೂ ಈ ರೀತಿ ತಪ್ಪಿ ಮಾತನಾಡಬಾರದು. ಮುಂದಕ್ಕಿದು ಬೇರೆಯವರಿಗೆ ಪಾಠವಾಗಬೇಕು ಎಂದು ತಿಳಿಸಿದರು.
ಪ್ರತಿಭಾ ಕುಳಾಯಿ ಆಡಿರುವ ಮುಖಕ್ಕೆ ಮಸಿ ಬಳಿಯುವ ಮಾತು ಸಮರ್ಥಿಸಲಾಗದು. ಅಧಿಕಾರಿಯ ಮಾತಿನಿಂದ ಸಮುದಾಯ, ಪೂಜಾರಿಯವರಿಗಾದ ಅವಮಾನದಿಂದ ಬೇಸತ್ತು ಮಸಿ ಬಳಿಯುವ ಮಾತನ್ನಾಡಿರಬಹುದು. ಅಧಿಕಾರಿಯಂತೆಯೇ ಪ್ರತಿಭಾ ಅವರೂ ಗಡಿಬಿಡಿ ಯಲ್ಲಿ ಮಾತನಾಡಿದ್ದಾರೆ. ಅವರದ್ದು ವೈಯಕ್ತಿಕ ಹೇಳಿಕೆಯಾಗಿದ್ದು, ಕಾಂಗ್ರೆಸ್ ವಹಿಸಿಕೊಳ್ಳಲಾಗದು ಎಂದರು.
ಕೆಲವರಿಂದ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ: ಮಂಗಳೂರಿನಲ್ಲಿ ಸಿಸಿಬಿ ವಶದಲ್ಲಿದ್ದ ಕಾರು ಮಾರಾಟವಾಗಿರುವ ವಿಚಾರದ ಬಗ್ಗೆ ವಿದಾನಸಭೆ ಯಲ್ಲಿ ಮಾತನಾಡಲು ಸಮಯ ಕೇಳಿದ್ದರೂ ಅವಕಾಶ ಸಿಕ್ಕಿಲ್ಲ. ಪೊಲೀಸರಿಗೆ ಗೊತ್ತಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಇಲಾಖೆಯಲ್ಲಿ ಶೇ.90ರಷ್ಟು ಪೊಲೀಸರು ಒಳ್ಳೆಯವರಿದ್ದರೂ ಶೇ.10 ಮಂದಿಯಿಂದ ಇಲಾಖೆಯ ಹೆಸರು ಹಾಳಾಗಿ ಜನರು ನಂಬಿಕೆ ಕಳೆದುಕೊಳ್ಳು ವಂತಾಗಿದೆ. ಪೊಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಶಾಸಕ ಯು.ಟಿ. ಖಾದರ್ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿಲ್ಲ, ಆದರೂ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಸರಕಾರಕ್ಕೆ ಪತ್ರ ಬರೆದಿದ್ದೇನೆ. ತನಿಖೆ ನಡೆಸಬೇಕಿರುವುದು, ಇಲಾಖೆಯನ್ನು ಪ್ರಶ್ನಿಸಬೇಕಿರುವುದು ಸರಕಾರದ ಜವಾಬ್ದಾರಿ. ಆದರೆ ಜನರು ಅವರಲ್ಲಿ ಕೇಳುವ ಬದಲು ಪ್ರತಿಪಕ್ಷದವರಲ್ಲಿ ಕೇಳುತ್ತಾರೆ ಎಂದು ಖಾದರ್ ಚಟಾಕಿ ಹಾರಿಸಿದರು.
ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಸೇಲ್ ಇಂಡಿಯಾ, ಲೂಟ್ ಇಂಡಿಯಾ ಆಗಿದೆ. ಜನರ ಮೇಲೆ ಇಲ್ಲಸಲ್ಲದ ತೆರಿಗೆ ಹೊರೆ ಹೇರಲಾಗಿದೆ. ತೈಲ ಬೆಲೆ ಏರಿಕೆಯಿಂದ ಎಲ್ಲ ವಸ್ತುಗಳಿಗೂ ಬೆಲೆಯೇರಿಕೆ ಸಣ್ಣ ಮಕ್ಕಳಿಗೂ ಗೊತ್ತಿದೆ. ಇದೆಲ್ಲ ಗೊತ್ತಿದ್ದರೂ ಸರಕಾರ ಕಾನೂನು ಬದ್ಧವಾಗಿ ಜನರನ್ನು ಲೂಟಿ ಮಾಡಿದೆ. ಪ್ರತಿ ಬಜೆಟ್‌ನಲ್ಲೂ ರಾಜ್ಯ, ಕರಾವಳಿ ಭಾಗಕ್ಕೆ ಯಾವುದೇ ಕೊಡುಗೆ ಇರುವುದಿಲ್ಲ. ಆದರೂ ಈ ಬಗ್ಗೆ ರಾಜ್ಯದ ಸಂಸದರು, ಜಿಲ್ಲೆಯ ಸಂಸದರೂ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಧ್ವನಿ ಎತ್ತುವ ತಾಕತ್ತು ತೋರಿಸುತ್ತಿಲ್ಲ. ಈ ಬಜೆಟ್ ಕಷ್ಟಕಾಲದಲ್ಲಿ ಮಾಂಗಲ್ಯ ಅಡವಿಡುವಂಥ ಪರಿಸ್ಥಿತಿ ನಿರ್ಮಿಸಿದೆ ಎಂದು ಖಾದರ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮುಹಮ್ಮದ್ ಮೋನು, ಸುದರ್ಶನ್ ಶೆಟ್ಟಿ, ಝಕರಿಯಾ ಮಲಾರ್, ಸದಾಶಿವ ಉಳ್ಳಾಲ್, ಫಾರೂಕ್ ತುಂಬೆ ಉಪಸ್ಥಿತರಿದ್ದರು.







