ಸರಕಾರಿ ಶಾಲೆಗಳನ್ನು ದತ್ತು ಪಡೆಯಲಿರುವ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ

ಬೆಂಗಳೂರು, ಫೆ.10: ಮಾಜಿ ಗೃಹ ಸಚಿವ, ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರು ಸರಕಾರಿ ಶಾಲೆಗಳ ದತ್ತು ಪಡೆದು ಅಗತ್ಯ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ.
ತಮ್ಮ ವಿಧಾನಸಭಾಕ್ಷೇತ್ರ ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿನ ಫೆ.16ರೊಳಗೆ ಶಾಲೆಗಳಿಗೆ ಭೇಟಿ ನೀಡಿ, ವಿವರವಾದ ಯೋಜನಾ ವರದಿಯನ್ನು ನೀಡುವಂತೆ ಇಲಾಖೆ ಅಧಿಕಾರಿಗಳನ್ನು ಸೂಚಿಸಿದ್ದಾರೆ.
ಪ್ರತಿ ಶಾಲೆಯಲ್ಲಿ ಅವಶ್ಯಕತೆಗಳನ್ನು ಪರಿಶೀಲಿಸಲು ಮತ್ತು ಕಾಮಗಾರಿಗಳನ್ನು ಪ್ರಾರಂಭಿಸಲು ಮತ್ತು ಮುಗಿಸಲು ದಿನಾಂಕಗಳನ್ನು ನಿಗದಿಪಡಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು, ಶಿಕ್ಷಣ ಇಲಾಖೆ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಶಾಲೆಗಳನ್ನು ಶಾಸಕರು ದತ್ತು ಪಡೆಯುವಂತೆ ಶಿಫಾರಸ್ಸು ಮಾಡಿದ್ದು ಸಚಿವ ಸುರೇಶ್‍ಕುಮಾರ್ ಈ ಯೋಜನೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ.
ಕಾರ್ಯಕ್ರಮದಡಿ ಸುಮಾರು 200 ಕೋಟಿ ರೂ. ಸಂಗ್ರಹಿಸಲಾಗಿದ್ದು, ಅದರಲ್ಲಿ ಸಿಂಹ ಪಾಲು ದಕ್ಷಿಣ ಕನ್ನಡದಿಂದ ಬಂದಿದೆ. ಬೆಳಗಾವಿ, ಬೆಂಗಳೂರು ಉತ್ತರ ಮತ್ತು ದಕ್ಷಿಣ, ಗದಗ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದಲೂ ಗಮನಾರ್ಹ ಹಣ ಸಂಗ್ರಹವಾಗಿದೆ.
ಈ ಯೋಜನೆಯಡಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕಟ್ಟಡಗಳ ಜೀರ್ಣೋದ್ಧಾರ, ಶಾಲೆಯ ಗಾರ್ಡನ್ ಅಭಿವೃದ್ಧಿ, ಶಾಲೆಗೆ ಕಾಂಪೌಂಡ್, ಅಗತ್ಯ ಸಲಕರಣೆ ಮತ್ತು ಪೀಠೋಪಕರಣಗಳು, ಕಂಪ್ಯೂಟರ್ ತರಬೇತಿ, ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ, ಆಟಿಕೆ ಸಾಮಾನು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
ರಾಮಲಿಂಗಾರೆಡ್ಡಿ ಅವರು ತಮ್ಮ ಕ್ಷೇತ್ರದಎಲ್ಲ ಶಾಲೆಗಳನ್ನು ಸುಧಾರಿಸಲು ಮೆಗಾ ವೆಲ್ಫೇರ್ ಅಸೋಸಿಯೇಶನ್‍ನ ರಾಮೋಜಿಗೌಡ, ಬಿ.ಮೋಹನ್ ಮತ್ತು ಸಾಗರ್ ಅವರೊಂದಿಗೆ ಕೈಜೋಡಿಸಿದ್ದಾರೆ.







