ಮ್ಯಾನುವೆಲ್ ಸ್ಕಾವೆಂಜರ್ಸ್‌ಗಳಿಗೆ ಅಗತ್ಯ ಸೌಲಭ್ಯ ಒದಗಿಸಿ: ಕಿರಣ್ ಫಡ್ನೇಕರ್

ಉಡುಪಿ, ಫೆ.10: ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಮ್ಯಾನುವೆಲ್‌ಸ್ಕಾವೆಂಜರ್ಸ್‌ಗಳಿಗೆ ಮ್ಯಾನುವೆಲ್ ಸ್ಕಾವೆಂಜರ್ಸ್ ವೃತ್ತಿ ಕಾಯ್ದೆಯಡಿ ದೊರಕಬೇಕಾದ ನಿವೇಶನ, ವಸತಿ, ಶಿಕ್ಷಣ, ಆರೋಗ್ಯ ಮಾಹಿತಿ, ಕೌಶಲ್ಯ ತರಬೇತಿ ಸವಲತ್ತುಗಳ ಕುರಿತು ಮಾಹಿತಿ ನೀಡಿ. ಇವರು ಸ್ವಯಂ ಉದ್ಯೋಗ ಮಾಡುವಲ್ಲಿ ಆಸಕ್ತಿ ಹೊಂದಿದ್ದಲ್ಲಿ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳ ಕುರಿತು ಅರಿವು ಮೂಡಿಸಿ. ಮುಂದೆ ಇವರು ಈ ವೃತ್ತಿಯಲ್ಲಿ ಮುಂದುವರೆಯದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಉಡುಪಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಹೇಳಿದ್ದಾರೆ.
ಮಂಗಳವಾರ ಬ್ರಹ್ಮಾವರದ ವಾರಂಬಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ಗಳ ಸಹಯೋಗ ದಲ್ಲಿ ಗುರುತಿಸಲ್ಪಟ್ಟ ಮ್ಯಾನುವೆಲ್ ಸ್ಕಾವೆಂಜರ್ಸ್‌ಗಳಿಗೆ ನಡೆದ ಜಿಲ್ಲಾ ಮಟ್ಟದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮ್ಯಾನುವೆಲ್ ಸ್ಕಾವೆಂಜರ್ಸ್ ವೃತ್ತಿಯಿಂದ ವಿಮುಖರಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಕೃಷಿ ಭೂಮಿ ಮಂಜೂರು ಮಾಡುವಂತೆ ಗುರುತಿಸಲ್ಪಟ್ಟ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಮನವಿ ಮಾಡಿದಾಗ, ಡಿಸಿ ಮನ್ನಾ ಜಾಗ ಅಥವಾ ದರ್ಖಾಸು ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಪಂ ಉಪ ಕಾರ್ಯದರ್ಶಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುತಿಸಲ್ಪಟ್ಟ ಮ್ಯಾನುವೆಲ್ ಸ್ಕಾವೆಂಜರ್ಸ್‌ಗಳಿಗೆ ಪುನರ್ವಸತಿ ಸೌಲಭ್ಯಕ್ಕೆ, ಗ್ರಾಪಂಗಳ ವತಿಯಿಂದ ಗುಡಿಕೈಗಾರಿಕೆಗೆ ಸಹಾಯಧನ ಹಾಗೂ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎನ್. ರಮೇಶ್, ಎಂ.ಎಸ್ ಕಾಯಿದೆ ಕುರಿತು ಮಾಹಿತಿ ನೀಡಿದರು.
ಶಿಬಿರದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶೈಲಜಾ ದೇಶಪಾಂಡೆ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾ ಅಧಿಕಾರಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ, ಅಂಬೇಡ್ಕರ್ ಅಭಿವೃದ್ಧಿ ನಿಮಗದ ಜಿಲ್ಲಾ ವ್ಯವಸ್ಥಾಪಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಿಡಿಓ ಮುತ್ತು ಕಾರ್ಯಕ್ರಮ ನಿರೂಪಿಸಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ವಿ ಮುಡ್ಲೂರು ವಂದಿಸಿದರು.







