ಉಡುಪಿ: ಘನತ್ಯಾಜ್ಯ ನಿರ್ವಹಣೆಗಾಗಿ ಕಾರ್ಯಾಗಾರ

ಉಡುಪಿ, ಫೆ.10: ಸ್ವಚ್ಛ ಸರ್ವೇಕ್ಷಣ್ -2021ರ ಅಂಗವಾಗಿ ನಗರಸಭೆ ಮತ್ತು ಸಾಹಸ್ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಬುಧವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಗರಸಭಾ ಸದಸ್ಯರಿಗೆ ಘನತ್ಯಾಜ್ಯ ವಸ್ತು ನಿರ್ವಹಣೆಯ ಕುರಿತು ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ನಗರಸಬೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಘನತ್ಯಾಜ್ಯ ವಸ್ತು ನಿರ್ವಹಣೆಯ ಕುರಿತು ವಿವರವಾದ ಮಾಹಿತಿ ನೀಡಿ, ಸಾರ್ವಜನಿಕರು ಸ್ವಚ್ಛತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ವಚ್ಛ ಸರ್ವೇಕ್ಷಣ್-2021ರ ಮೊಬೈಲ್ ತಂತ್ರಾಂಶದಲ್ಲಿ ಸಲ್ಲಿಸು ವಂತೆ ತಿಳಿಸಿದರು.
ಫೆ.13ರಂದು ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಉಡುಪಿ ನಗರಸಭಾ ವ್ಯಾಪ್ತಿಯ ಕರಾವಳಿ ಜಂಕ್ಷನ್‌ನಿಂದ ಬಲಾಪಾದೆವರೆಗೆ ಹಾಗೂ ಕರಾವಳಿ ಜಂಕ್ಷನ್‌ನಿಂದ ಸಂತೆಕಟ್ಟೆವರೆಗೆ ರಾಷ್ಟ್ರೀಯ ಹೆದ್ದಾರಿ-66ರ ಎರಡೂ ಬದಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಉಡುಪಿ ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಈ ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಸಾಲ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಂ. ಅಂಚನ್, ಪೌರಾಯುಕ್ತ ಉದಯ್ ಶೆಟ್ಟಿ, ಪರಿಸರ ಅಭಿಯಂತರಿ ಸ್ನೇಹ ಕೆ.ಎಸ್ ಹಾಗೂ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು. ನಗರಸಬೆಯ ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ ವಿ ಸ್ವಾಗತಿಸಿ, ನಿರೂಪಿಸಿದರು.







