ವೀರಕಂಭ ಗ್ರಾಪಂ ಅಧ್ಯಕ್ಷರಾಗಿ ದಿನೇಶ್, ಉಪಾಧ್ಯಕ್ಷೆಯಾಗಿ ಶೀಲಾ ನಿರ್ಮಲ್ ವೇಗಸ್ ಆಯ್ಕೆ
ಬಂಟ್ವಾಳ : ಭಾರೀ ಕುತೂಹಲ ಕೆರಳಿಸಿದ್ದ ವೀರಕಂಬ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೊನೆಗೂ ಮುಗಿದಿದ್ದು ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ದಿನೇಶ್ ವೀರಕಂಬ ಮತ್ತು ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೀಲಾ ನಿರ್ಮಲ್ ವೇಗಸ್ ಆಯ್ಕೆಯಾಗಿದ್ದಾರೆ.
ಒಟ್ಟು 14 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ 7 ಮತ್ತು ಬಿಜೆಪಿ ಬೆಂಬಲಿತ 7 ಸದಸ್ಯರು ಗೆಲುವು ಸಾಧಿಸಿದ್ದರು.
ಇಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 6 ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ 8 ಮತಗಳು ಪಡೆದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ದಿನೇಶ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಒಬ್ಬ ಅಭ್ಯರ್ಥಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.
ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಲಾ 7 ಮತಗಳನ್ನು ಪಡೆದು ಸಮಬಲವಾಗಿದ್ದು ಬಳಿಕ ಟಾಸ್ ಮೂಲಕ ನಡೆದ ಆಯ್ಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೀಲಾ ವೇಗಸ್ ಗೆಲುವು ಸಾಧಿಸಿದ್ದಾರೆ.





