ಗ್ರೀನ್ ಬಡ್ಸ್ ಠೇವಣಿದಾರರ ಅಹೋರಾತ್ರಿ ಧರಣಿ: ಸ್ಥಳಕ್ಕೆ ಜಿಲ್ಲಾಧಿಕಾರಿ ಸಿಂಧೂರಿ ಭೇಟಿ
ಪ್ರತಿಭಟನೆ ಕೈ ಬಿಡುವಂತೆ ಮನವಿ

ಮೈಸೂರು,ಫೆ.10: ಗ್ರೀನ್ ಬಡ್ಸ್ ಕಂಪನಿಯಿಂದ ಬರಬೇಕಿರುವ ಠೇವಣಿ ಹಣವನ್ನು ವಾಪಸ್ ಕೊಡಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಗ್ರೀನ್ ಬಡ್ಸ್ ಠೇವಣಿದಾರರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ ನೀಡಿ ಮನವಿ ಸ್ವೀಕರಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಳೆದ ಮೂರು ದಿನಗಳಿಂದ ಗ್ರೀನ್ ಬಡ್ಸ್ ಠೇವಣಿದಾರರು ಹಾಗೂ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಗ್ರೀನ್ ಬಡ್ಸ್ ಕಂಪನಿ ಹೂಡಿಕೆ ಹಣವನ್ನು ಸತತ 8 ವರ್ಷಗಳಿಂದ ನೀಡದೇ ವಂಚಿಸುತ್ತಿದ್ದು, ಕಂಪನಿಯ ವಿರುದ್ಧ ಸರ್ಕಾರ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರೂ ನಿರ್ಲಕ್ಷ್ಯ ಮಾಡುತ್ತಿರುವುದನ್ನು ವಿರೋಧಿಸಿ ಗ್ರೀನ್ ಬಡ್ಸ್ ಕಾರ್ಯಕರ್ತರು ಮತ್ತು ಠೇವಣಿದಾರರ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು.
ಗ್ರೀನ್ ಬಡ್ಸ್ ಠೇವಣಿದಾರರ ಧರಣಿ ಸ್ಥಳಕ್ಕೆ ಬುಧವಾರ ರಾತ್ರಿ ಆಗಮಿಸಿ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಒಂದೂವರೆ ತಿಂಗಳ ಒಳಗಾಗಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿ, ಚಳುವಳಿಯನ್ನು ಕೈಬಿಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ತಾತ್ಕಾಲಿಕವಾಗಿ ಕೈಬಿಡಲಾಯಿತು.
ಇದಕ್ಕೂ ಮೊದಲು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಸುಜೀವ್ ಸಂಸ್ಥೆಯ ನಿರ್ದೇಶಕರಾದ ಡಾ.ರಾಜಾರಾಂ ಸಾಂತ್ವನ ಹೇಳಿ ಊಟೋಪಚಾರಕ್ಕೆ ಆಹಾರ ಸಾಮಾಗ್ರಿಗಳನ್ನು ನೀಡಿ, ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದ ಜೊತೆ ಮಾತನಾಡಿ, ನಿಮ್ಮ ಬೆಂಬಲಕ್ಕೆ ನಾವು ದನಿಗೂಡಿಸುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹಾಗೂ ಧರಣಿ ನೇತೃತ್ವ ವಹಿಸಿರುವ ಜಿ.ವಿ.ಲಕ್ಷ್ಮಿದೇವಿ, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.







