ತಂಡದ ಆಯ್ಕೆಯಲ್ಲಿ ಕೋಮು ಆದ್ಯತೆ ಆರೋಪ: ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ವಸೀಂ ಜಾಫರ್ ಪ್ರತಿಕ್ರಿಯಿಸಿದ್ದು ಹೀಗೆ

ಹೊಸದಿಲ್ಲಿ: ರಾಜ್ಯ ಕ್ರಿಕೆಟ್ ಸಂಘದೊಂದಿಗಿನ ವಿವಾದದಿಂದಾಗಿ ಇತ್ತೀಚೆಗೆ ಉತ್ತರಾಖಂಡದ ಕೋಚ್ ಹುದ್ದೆಯನ್ನು ತ್ಯಜಿಸಿದ ಭಾರತದ ಮಾಜಿ ಕ್ರಿಕೆಟಿಗ ವಸೀಂ ಜಾಫರ್ ಅವರು ತಂಡದಲ್ಲಿ ಧರ್ಮ ಆಧಾರಿತ ಆಯ್ಕೆಗಳನ್ನು ಒತ್ತಾಯಿಸಲು ಪ್ರಯತ್ನಿಸಿದ್ದಾರೆ ಎಂಬ ಅಸೋಸಿಯೇಶನ್ ನ ಅಧಿಕಾರಿಗಳ ಆರೋಪವನ್ನು ಬುಧವಾರ ತಿರಸ್ಕರಿಸಿದರು.
ಭಾರತಕ್ಕಾಗಿ 31 ಟೆಸ್ಟ್ ಪಂದ್ಯಗಳನ್ನು ಆಡಿದ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧಿ ಪಡೆದಿರುವ 42ರ ಹರೆಯದ ವಸೀಂ ಜಾಫರ್ ಮುಸ್ಲಿಂ ಆಟಗಾರರತ್ತ ಒಲವು ತೋರಿದ್ದಾರೆ ಎಂಬ ಆರೋಪವನ್ನು ಕ್ರಿಕೆಟ್ ಅಸೋಸಿಯೇಶನ್ ಆಫ್ ಉತ್ತರಾಖಂಡದ ಕಾರ್ಯದರ್ಶಿ ಮಹೀಮ್ ವರ್ಮಾ ಅವರು ಮಾಧ್ಯಮಗಳಿಗೆ ತಿಳಿಸಿದ್ದು ಜಾಫರ್ ರಿಗೆ ನೋವುಂಟು ಮಾಡಿದೆ ಎಂದು ndtv.com ವರದಿ ಮಾಡಿದೆ.
"ಆಯ್ಕೆಗಾರರ ಹಸ್ತಕ್ಷೇಪ ಮತ್ತು ಅನರ್ಹ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದೆ" ಎಂಬ ಕಾರಣ ನೀಡಿ ವಸೀಂ ಜಾಫರ್ ಮಂಗಳವಾರ ರಾಜೀನಾಮೆ ನೀಡಿದ್ದರು. ಈ ವಿಚಾರಕ್ಕೂ ಕೋಮುಬಣ್ಣ ನೀಡಿರುವುದು ನನ್ನನ್ನು ದುಃಖಕ್ಕೀಡು ಮಾಡಿದೆ ಎಂದು ಜಾಫರ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ನಾನು ಇಕ್ಬಾಲ್ ಅಬ್ದುಲ್ಲಾ ಪರವಾಗಿದ್ದೇನೆ ಎಂಬ ಆರೋಪವನ್ನು ಸಂಘವು ವ್ಯಕ್ತಪಡಿಸಿದ್ದು ಇಕ್ಬಾಲ್ ಅಬ್ದುಲ್ಲಾ ಅವರನ್ನು ನಾಯಕನನ್ನಾಗಿ ಮಾಡಲು ನಾನು ಬಯಸುತ್ತೇನೆ ಎಂದು ಆರೋಪಿಸಿರುವುದು ಸಂಪೂರ್ಣ ತಪ್ಪು ಮಾಹಿತಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ತಂಡದ ತರಬೇತಿಗಾಗಿ ಮೌಲ್ವಿಗಳನ್ನು ಕರೆತರುತ್ತಾರೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ನಾವು ಶುಕ್ರವಾರದಂದು ನಮಾಝ್ ಮಾಡುವ ಸಂದರ್ಭ ಕ್ರಮವಾಗಿ ಮೂರು ವಾರಗಳ ಕಾಲ ಮೌಲ್ವಿಯೊಬ್ಬರು ಬಂದಿದ್ದರು. ಅವರನ್ನು ನಾವೇನೂ ಆಹ್ವಾನಿಸಿರಲಿಲ್ಲ. ಇಕ್ಬಾಲ್ ಅಬ್ದುಲ್ಲಾ ಶುಕ್ರವಾರದ ನಮಾಝ್ ಗಾಗಿ ಅಸೋಸಿಯೇಶನ್ ನ ಅನುಮತಿ ಪಡೆದಿದ್ದಾರೆ.
"ನಾವು ಪ್ರತಿದಿನ ಡ್ರೆಸ್ಸಿಂಗ್ ರೂಮ್ ನಲ್ಲಿ ನಮಾಝ್ ಮಾಡುತ್ತಿದ್ದೇವೆ. ಶುಕ್ರವಾರದ ನಮಾಝ್ ಮಾತ್ರ ಗುಂಪಾಗಿ ನಿರ್ವಹಿಸಬೇಕಾದ ಕಾರಣ ಒಟ್ಟಾಗಿ ನಮಾಝ್ ಮಾಡುತ್ತೇವೆ. ಇದು ಕೂಡಾ ಒಂದು ವಿವಾದವಾಗಬಹುದು ಎಂಬ ಕಲ್ಪನೆ ನನಗಿರಲಿಲ್ಲ" ಎಂದು ವಸೀಂ ಜಾಫರ್ ಹೇಳಿಕೆ ನೀಡಿದ್ದಾರೆ.
"ನಾನು ಕೋಮುವಾದಿಯಾಗಿದ್ದರೆ, ನಮ್ಮ ಪ್ರಾರ್ಥನಾ ಸಮಯಕ್ಕೆ ಅನುಗುಣವಾಗಿ ನಾನು ಅಭ್ಯಾಸದ ಸಮಯವನ್ನು ಸರಿಹೊಂದಿಸಬಹುದಿತ್ತು ಆದರೆ ನಾನು ಹಾಗಲ್ಲ" ಎಂದು ಅವರು ಹೇಳಿದ್ದಾರೆ.







