ಉತ್ತರಾಖಂಡ: ರಕ್ಷಣಾ ಕಾರ್ಯಾಚರಣೆಗೆ ಭಗ್ನಾವಶೇಷ, ಕೆಸರು ಅಡ್ಡಿ

ಡೆಹ್ರಾಡೂನ್, ಫೆ.10: ಉತ್ತರಾಖಂಡದಲ್ಲಿ ರವಿವಾರ ಬೃಹತ್ ನೀರ್ಗಲ್ಲು ಕುಸಿದು ಸಂಭವಿಸಿದ ಭೀಕರ ಪ್ರವಾಹದಿಂದ ತಪೋವನ ವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಕಾರ್ಯಾಚರಣೆಗೆ ಸುರಂಗ ಮಾರ್ಗದಲ್ಲಿ ಬಿದ್ದಿರುವ ಭಗ್ನಾವಶೇಷ, ಕಸಕಡ್ಡಿಗಳ ರಾಶಿ ಹಾಗೂ ಕೆಸರು ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ ರಕ್ಷಣಾ ಕಾರ್ಯಕರ್ತರು ಸುರಂಗದಲ್ಲಿ ಸಿಲುಕಿದ್ದ 35 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಬೃಹತ್ ಯಂತ್ರಗಳ ನೆರವಿನಿಂದ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. 2.5 ಉದ್ದದ ಸುರಂಗದ 120 ಮೀಟರ್‌ನಷ್ಟು ಒಳಗೆ ಸಾಗಲು ರಕ್ಷಣಾ ಕಾರ್ಯಕರ್ತರಿಗೆ ಸಾಧ್ಯವಾಗಿದೆ. ಕೆಸರು ಮಿಶ್ರಿತ ನೀರು ನಿರಂತರ ಹರಿದುಬರುತ್ತಿರುವ ಕಾರಣ ಸುರಂಗದೊಳಗೆ ಮುಂದೆ ಸಾಗಲು ರಕ್ಷಣಾ ಕಾರ್ಯಕರ್ತರಿಗೆ ತೊಡಕಾಗುತ್ತಿದೆ. ಸುರಂಗದ ಹೊರಭಾಗದಲ್ಲಿ ವೈದ್ಯಕೀಯ ಸಿಬಂದಿಗಳ ತಂಡವೊಂದನ್ನು ಸಜ್ಜುಗೊಳಿಸಲಾಗಿದ್ದು ಆಮ್ಲಜನಕದ ಸಿಲಿಂಡರ್, ಸ್ಟ್ರೆಚರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಸುರಂಗದಿಂದ ಕೆಸರು ಮಿಶ್ರಿತ ನೀರು ಹರಿದುಬರುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ಸುರಂಗದೊಳಗೆ ಯಂತ್ರಗಳು ಕೆಲಸ ಮಾಡುತ್ತಿವೆ. ಆದರೆ ರಭಸದಿಂದ ನೀರು ಹೊರಬರುವ ಸಾಧ್ಯತೆಯಿರುವುದರಿಂದ ಎಚ್ಚರಿಕೆಯಿಂದ ಮುಂದುವರಿಯಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.





