ಮಗನನ್ನೇ ಕೊಂದು ತನಿಖೆಯ ಹಾದಿ ತಪ್ಪಿಸಿದ್ದ ಆರೋಪಿ ತಂದೆಯ ಬಂಧನ

ಮಡಿಕೇರಿ, ಫೆ.10: ಪುತ್ರ ಜಾರಿ ಬಿದ್ದು ಮೃತಪಟ್ಟನೆಂದು ದೂರು ನೀಡಿದ್ದ ತಂದೆಯೇ ಮಗನನ್ನು ಕೊಲೆ ಮಾಡಿದ ಆರೋಪದಡಿ ಬಂಧಿಯಾಗಿರುವ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಡಿಕೇರಿ ಡಿಪೋದ ಕೆಎಸ್ಆರ್ಟಿಸಿ ನಿರ್ವಾಹಕ, ಶನಿವಾರಸಂತೆ ಬೈಪಾಸ್ ರಸ್ತೆ ನಿವಾಸಿ ಮಹೇಂದ್ರ ಕುಮಾರ್ ಬಿ.ಬಿ.(52) ಬಂಧಿತ ಆರೋಪಿ.
ಇದೇ ಫೆ.1 ರಂದು ಮಹೇಂದ್ರ ಕುಮಾರ್ ನ ಪುತ್ರ ಏಕಾಂತಚಾರಿ ಎಂಬಾತ ತೋಟದಲ್ಲಿ ಮರದಿಂದ ಜಾರಿ ಬಿದ್ದು ಮೃತಪಟ್ಟಿರುವುದಾಗಿ ಪ್ರಕರಣ ದಾಖಲಾಗಿತ್ತು.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿ ಶವ ಪರೀಕ್ಷೆಯ ಸಂದರ್ಭ ಮೃತನ ದೇಹದಲ್ಲಿ ಹೊಡೆದಾಗ ಆಗುವ ಕಂದಿದ ಗುರುತುಗಳು ಕಂಡು ಬಂದಿತ್ತು. ಈ ಬಗ್ಗೆ ಸಂಶಯಗೊಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಮಹೇಂದ್ರ ಕುಮಾರನೇ ತನ್ನ ಪುತ್ರ ಏಕಾಂತಚಾರಿಯನ್ನು ಜಮೀನಿಗೆ ಕರೆದುಕೊಂಡು ಹೋಗಿ ಹೊಡೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರ ನೇತೃತ್ವದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ಮಹೇಶ್ ಬಿ.ಜಿ., ಶನಿವಾರಸಂತೆ ಪೊಲೀಸ್ ಠಾಣೆಯ ಪಿ.ಎಸ್.ಐ.ಹೆಚ್.ಈ.ದೇವರಾಜು, ಸಿಬ್ಬಂದಿಗಳಾದ ಲೋಕೇಶ್, ಅನಂತ್ ಕುಮಾರ್, ಮುರಳಿ, ಪ್ರದೀಪ್ ಕುಮಾರ್, ಹರೀಶ್, ಉಪ ವಿಭಾಗದ ಕ್ರೈಂ ಸಿಬ್ಬಂದಿ ದಯಾನಂದ್, ಸಿಡಿಆರ್ ಘಟಕದ ಗಿರೀಶ್ ಹಾಗೂ ರಾಜೇಶ್ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಎಸ್‍ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.







