ರಾಜ್ಯದಲ್ಲಿ ಫೋರೆನ್ಸಿಕ್ ಲ್ಯಾಬ್‍ಗಳ ಕೊರತೆ: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿದ ಹೈಕೋರ್ಟ್

ಬೆಂಗಳೂರು, ಫೆ.10: ರಾಜ್ಯದಲ್ಲಿರುವ ಫೋರೆನ್ಸಿಕ್ ಲ್ಯಾಬ್‍ಗಳ ಕೊರತೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.
ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ರಾಜ್ಯಾದ್ಯಂತ ಅಗತ್ಯ ಪ್ರಮಾಣದ ಲ್ಯಾಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಿ, ಇರುವ ಲ್ಯಾಬ್‍ಗಳ ಖಾಲಿ ಹುದ್ದೆ ಭರ್ತಿಗೆ ಕೈಗೊಂಡ ಕ್ರಮಗಳು ಏನು? ಡಿಎನ್‍ಎ, ನಾರ್ಕೋಟಿಕ್ ಪರೀಕ್ಷೆಗಳ ದಾಖಲೆಗಳ ಪರೀಕ್ಷೆಗೆ ಕಾಲಮಿತಿ ಎಷ್ಟು? ಲ್ಯಾಬ್‍ಗಳಲ್ಲಿ ನಡೆಸುವ ಎಲ್ಲ ಪರೀಕ್ಷೆಗಳ ವರದಿಗೆ ಸಮಯ ನಿಗದಿ ಮಾಡಲಾಗಿದೆಯೇ? ಎಲ್ಲದರ ಬಗ್ಗೆ ಅಗತ್ಯವಾಗಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಸೂಚನೆ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಮಾ.15ರೊಳಗೆ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದೆ. ಈ ಸಂಬಂಧ ಗೃಹ ಇಲಾಖೆ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಸಹ ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆಯನ್ನು ಮಾ.18ಕ್ಕೆ ನಿಗದಿಪಡಿಸಿದೆ.





