12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಸ್ವಾಯತ್ತತೆ ಒದಗಿಸುವ ಮಸೂದೆಗೆ ಸಂಸತ್ತಿನ ಅನುಮೋದನೆ

ಹೊಸದಿಲ್ಲಿ, ಫೆ.10: ದೇಶದ 12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಸ್ವಾಯತ್ತತೆ ಕಲ್ಪಿಸುವ ಮತ್ತು ಅವುಗಳ ಆಡಳಿತವನ್ನು ವೃತ್ತಿಪರಗೊಳಿಸುವ ನಿಟ್ಟಿನಲ್ಲಿ ರೂಪಿಸಲಾದ ಮಸೂದೆಗೆ ಸಂಸತ್ತು ಬುಧವಾರ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ.
ಪ್ರಮುಖ ಬಂದರುಗಳ ಪ್ರಾಧಿಕಾರ ಮಸೂದೆ 2020ನ್ನು ರಾಜ್ಯಸಭೆಯಲ್ಲಿ ಮತಕ್ಕೆ ಹಾಕಿದಾಗ ಪರವಾಗಿ 84 ಮತ್ತು ವಿರುದ್ಧವಾಗಿ 44 ಮತ ಚಲಾವಣೆಯಾಗಿದೆ. 2020ರ ಸೆಪ್ಟೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ ದೊರಕಿತ್ತು. ರಾಜ್ಯಸಭೆಯಲ್ಲಿ ಅನುಮೋದನೆ ದೊರೆತ ಬಳಿಕ ಮಾತನಾಡಿದ ಹಡಗು ಮತ್ತು ಜಲಮಾರ್ಗ ಇಲಾಖೆ ಸಚಿವ ಮನ್‌ಸುಖ್ ಮಾಂಡವೀಯ, ಇದು ಪ್ರಮುಖ ಬಂದರುಗಳ ಖಾಸಗೀಕರಣದ ಉದ್ದೇಶದ ಮಸೂದೆಯಲ್ಲ, ಖಾಸಗಿ ಬಂದರುಗಳೊಂದಿಗೆ ಸ್ಪರ್ಧಿಸಲು ಪ್ರಮುಖ ಬಂದರುಗಳ ಅಧಿಕಾರ ಹೆಚ್ಚಿಸುವ ಉದ್ದೇಶದ ಮಸೂದೆಯಾಗಿದ್ದು ಆಡಳಿತವನ್ನು ವೃತ್ತಿಪರವಾಗಿಸಲು ಆಡಳಿತ ಮಂಡಳಿ ರಚಿಸಲಾಗುವುದು ಎಂದರು.
ಮಸೂದೆಯು ಬಂದರುಗಳನ್ನು ನಾಶಗೊಳಿಸುವ ಉದ್ದೇಶ ಹೊಂದಿದೆ ಎಂಬ ಕೆಲವು ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಸಚಿವರು, ಮಸೂದೆಯು ಬಂದರುಗಳನ್ನು ವಿಶ್ವದರ್ಜೆಗೆ ಏರಿಸಲಿದೆ ಮತ್ತು ಆಡಳಿತ ಮಂಡಳಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಒದಗಿಸಲಿದೆ ಎಂದರು.
ಪ್ರಮುಖ ಬಂದರುಗಳ ನಿಯಂತ್ರಣ, ಕಾರ್ಯಾಚರಣೆ ಮತ್ತು ಯೋಜನೆಗೆ ಅವಕಾಶ ಒದಗಿಸುವ ಜೊತೆಗೆ ಆಡಳಿತ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಬಂದರು ಆಡಳಿತ ಮಂಡಳಿಗೆ ವರ್ಗಾಯಿಸಲು ಮಸೂದೆ ಅವಕಾಶ ನೀಡುತ್ತದೆ. ದೇಶದಲ್ಲಿ 12 ಪ್ರಮುಖ ಬಂದರುಗಳಿವೆ. ದೀನದಯಾಳ್(ಕಾಂಡ್ಲ) ಬಂದರು, ಮುಂಬೈ, ಮರ್ಮ್‌ಗೋವಾ, ಜೆಎನ್‌ಪಿಟಿ, ನವಮಂಗಳೂರು, ಕೊಚಿನ್, ಚೆನ್ನೈ, ಕಾಮರಾಜಾರ್(ಎಣ್ಣೋರ್), ವಿಒ ಚಿದಂಬರ್‌ನಾರ್, ವಿಶಾಖಪಟ್ಟಣಂ, ಪಾರದೀಪ್ ಮತ್ತು ಕೋಲ್ಕತಾ. 2019-20ರಲ್ಲಿ ಈ ಬಂದರುಗಳಲ್ಲಿ ಒಟ್ಟು 705 ಮಿಲಿಯನ್ ಟನ್ ಸರಕು ವ್ಯವಹಾರ ನಿರ್ವಹಿಸಲಾಗಿದೆ.







