ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಬಿಜೆಪಿ

ಹೊಸದಿಲ್ಲಿ: ಲೋಕಸಭೆಯಲ್ಲಿ ಭಾರತದ ಮಾಜಿ ಮುಖ್ಯನ್ಯಾಯಾಧೀಶರ ಕುರಿತು ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ)ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬುಧವಾರ ಬಿಜೆಪಿ ಹಕ್ಕು ಚ್ಯುತಿ ಮಂಡಿಸಿದೆ.
ಟಿಎಂಸಿ ಸಂಸದೆಯ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕಲಾಗಿತ್ತು. ಆದರೆ ಇದೀಗ ಬಿಜೆಪಿ ಮೊಯಿತ್ರಾರನ್ನು ಸಂಸತ್ತಿನಿಂದ ವಜಾಗೊಳಿಸಲು ಕೋರಿದೆ.
ರಾಜಸ್ಥಾನದ ಪಾಲಿ ಸಂಸದ ಹಾಗೂ ಮಾಜಿ ಕಾನೂನು ಸಚಿವರಾದ ಪಿ.ಪಿ. ಚೌಧರಿ ಅವರು ಮೊಯಿತ್ರಾ ವಿರುದ್ದ ಹಕ್ಕುಚ್ಯುತಿ ಮಂಡನೆ ನಿರ್ಣಯ ಮಂಡಿಸಿದರು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮೊಯಿತ್ರಾ ಅವರ ಲೋಕಸಭೆಯ ಸದಸ್ವತ್ವ ರದ್ದುಪಡಿಸಬೇಕೆಂದು ಒತ್ತಾಯಿಸಿದ ಬಳಿಕ ಈ ನಿರ್ಣಯ ಅಂಗೀಕರಿಸಲಾಗಿದೆ.
ಸೋಮವಾರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಅವರು ಮಹುವಾ ಮೊಯಿತ್ರಾ ಅವರ ಹೇಳಿಕೆಯನ್ನು ಖಂಡಿಸಿದ್ದರು. ಆದರೆ, ಆಕೆಯ ವಿರುದ್ದ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ಉದ್ದೇಶವನ್ನು ವ್ಯಕ್ತಪಡಿಸಿರಲಿಲ್ಲ. ಲೋಕಸಭೆಯಲ್ಲಿ ತಾನು ಮಾಡಿದ್ದ ಭಾಷಣದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೊಯಿತ್ರಾ ಹರಿದುಬಿಟ್ಟಿರುವ ಕಾರಣ ಸರಕಾರವು ತನ್ನ ನಿಲುವನ್ನು ಬದಲಿಸಿದೆ ಎಂದು ವರದಿಯಾಗಿದೆ.





