ರಾಜಕಾರಣಿಯಾಗಿ ನನ್ನ ಕೆಲಸ ಸಂಪೂರ್ಣ ತೃಪ್ತಿ ಕೊಟ್ಟಿದೆ: ಗುಲಾಮ್ ನಬಿ ಆಝಾದ್
ನನಗೆ ಇನ್ನು ಏನೂ ಬೇಡ, ನಾನೀಗ ಮುಕ್ತನಾಗಿರುವೆ

ಹೊಸದಿಲ್ಲಿ: "ಜನರು ನನ್ನನ್ನು ಎಲ್ಲ ಸ್ಥಾನಗಳಲ್ಲಿ ನೋಡಿದ್ದಾರೆ. ಇದೀಗ ನಾನು ಮುಕ್ತನಾಗಿರುವೆ. ಇನ್ನು ಮುಂದೆ ಸಂಸದ, ಸಚಿವ ಅಥವಾ ಪಕ್ಷದ ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ. ರಾಜಕಾರಣಿಯಾಗಿ ನನ್ನ ಕೆಲಸದಿಂದ ಸಂಪೂರ್ಣ ತೃಪ್ತನಾಗಿದ್ದೇನೆ'' ಎಂದು ಶೀಘ್ರದಲ್ಲೇ ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾಗಲಿರುವ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಝಾದ್ ಬುಧವಾರ ಹೇಳಿದ್ದಾರೆ.
"ನಾನು 1975ರಲ್ಲಿ ಜಮ್ಮು ಹಾಗೂ ಕಾಶ್ಮೀರದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ.ನಾನು ಪಕ್ಷದಲ್ಲಿ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಅನೇಕ ಪ್ರಧಾನಮಂತ್ರಿಗಳೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ನಾನು ರಾಷ್ಟ್ರಕ್ಕಾಗಿ ಕೆಲಸ ಮಾಡಿದ ಭಾಗ್ಯಶಾಲಿ ಎಂದು ಭಾವಿಸುವೆ. ನನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯವಾಯಿತು ಎಂಬ ಬಗ್ಗೆ ಸಂತೋಷವಾಗುತ್ತಿದೆ. ಜಗತ್ತು ಹಾಗೂ ದೇಶವನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಕ್ಕಿತು'' ಎಂದು ಆಝಾದ್ ಎಎನ್ ಐಗೆ ತಿಳಿಸಿದ್ದಾರೆ.
"ರಾಜಕಾರಣಿಯಾಗಿ ನನ್ನ ಕೆಲಸದಲ್ಲಿ ನಾನು ಸಂಪೂರ್ಣ ತೃಪ್ತಿ ಹೊಂದಿದ್ದೇನೆ. ನಾನು ಜೀವಂತವಾಗಿರುವ ತನಕವೂ ಸಾರ್ವಜನಿಕರ ಸೇವೆ ಮುಂದುವರಿಸುವ ವಿಶ್ವಾಸ ನನಗಿದೆ'' ಎಂದು ಅವರು ಹೇಳಿದರು.





