ಪ್ರೌಢ ವಯಸ್ಕ ಮುಸ್ಲಿಂ ಯುವತಿಯು ತನ್ನಿಚ್ಛೆಯಂತೆ ವಿವಾಹವಾಗಬಹುದು: ಹೈಕೋರ್ಟ್

ಚಂಡೀಗಢ, ಫೆ.10: ಪ್ರೌಢ ವಯಸ್ಕ ಮುಸ್ಲಿಮ್ ಹುಡುಗಿಯರು ಯಾರನ್ನು ಬೇಕಾದರೂ ಮದುವೆಯಾಗಲು ಸ್ವತಂತ್ರರು ಎಂದು ಮುಸ್ಲಿಂ ವೈಯಕ್ತಿಕ ಕಾನೂನನ್ನು ಉಲ್ಲೇಖಿಸಿ ಪಂಜಾಬ್ ಮತ್ತು ಹರ್ಯಾನ ಹೈಕೋರ್ಟ್ ತೀರ್ಪು ನೀಡಿದೆ.
ಸರ್ ದಿನ್‌ಶಾ ಮುಲ್ಲಾ ಬರೆದ ‘ಪ್ರಿನ್ಸಿಪಲ್ಸ್ ಆಫ್ ಮುಹಮ್ಮದನ್ ಲಾ’ ಪುಸ್ತಕದ 195ನೇ ಅನುಚ್ಛೇದವನ್ನು ಉಲ್ಲೇಖಿಸಿದ ಹೈಕೋರ್ಟ್, ಪ್ರೌಢಾವಸ್ಥೆಗೆ ಬಂದ ಮುಸ್ಲಿಂ ಹುಡುಗಿಯರು ತಮ್ಮಿಚ್ಛೆಯಂತೆ , ತಾವು ಆಯ್ಕೆ ಮಾಡಿದ ವ್ಯಕ್ತಿಯೊಂದಿಗೆ ವೈವಾಹಿಕ ಒಪ್ಪಂದಕ್ಕೆ ಬರಬಹುದು ಎಂದು ಹೈರ್ಕೋರ್ಟ್ ಹೇಳಿದೆ. ಈ ಪುಸ್ತಕದ ಪ್ರಕಾರ 15 ವರ್ಷ ಪೂರ್ತಿಯಾದರೆ ಪ್ರೌಢಾವಸ್ಥೆ ಎಂದು ಪರಿಗಣಿಸಲಾಗುತ್ತದೆ.
ಪಂಜಾಬ್‌ನ ಮುಸ್ಲಿಂ ದಂಪತಿ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ಹೈಕೋರ್ಟ್ ಈ ತೀರ್ಪು ನೀಡಿದೆ. 36 ವರ್ಷದ ವ್ಯಕ್ತಿ ಹಾಗೂ 17 ವರ್ಷದ ಹುಡುಗಿ 2021ರ ಜನವರಿ 21ರಂದು ಮುಸ್ಲಿಂ ಸಂಪ್ರದಾಯ ಮತ್ತು ಧಾರ್ಮಿಕ ವಿಧಿಯ ಮೂಲಕ ವಿವಾಹವಾಗಿದ್ದರು. ಈ ಮದುವೆಗೆ ಹೆತ್ತವರ ವಿರೋಧವಿದ್ದ ಕಾರಣ ದಂಪತಿ ರಕ್ಷಣೆ ಕೋರಿ ಹೈಕೋರ್ಟ್‌ನ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮನೆಯವರ ವಿರೋಧವಿದ್ದ ಮಾತ್ರಕ್ಕೆ ದಂಪತಿಗೆ ಸಂವಿಧಾನದಡಿ ನೀಡಲಾಗಿರುವ ಮೂಲಭೂತ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿದೆ.







