ಎರಡನೇ ಟೆಸ್ಟ್:ಜೇಮ್ಸ್ ಆ್ಯಂಡರ್ಸನ್ ಅಲಭ್ಯ?

ಚೆನ್ನೈ: ಮಂಗಳವಾರ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಪಂದ್ಯವನ್ನು ಗೆಲ್ಲಿಸಿಕೊಟ್ಟ ಹೊರತಾಗಿಯೂ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
2021ರಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಹೊಂದಿರುವ ಇಂಗ್ಲೆಂಡ್ ಟೀಮ್ ಮ್ಯಾನೇಜ್‌ಮೆಂಟ್ ಈ ವರ್ಷ ಕಟ್ಟುನಿಟ್ಟಿನ ರೊಟೇಶನಲ್ ಪಾಲಿಸಿ ಅನುಸರಿಸುತ್ತಿದೆ. ಹೀಗಾಗಿ ಈ ನಿಯಮದ ಅನ್ವಯ ಆ್ಯಂಡರ್ಸನ್ ಗೆ ಎರಡನೇ ಟೆಸ್ಟ್ ನಲ್ಲಿ ವಿಶ್ರಾಂತಿ ನೀಡಿ ಇನ್ನೋರ್ವ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡುವ ನಿರೀಕ್ಷೆ ಇದೆ. ಫೆಬ್ರವರಿ 13ರಿಂದ ಚೆನ್ನೈನಲ್ಲೇ 2ನೇ ಟೆಸ್ಟ್ ಆರಂಭವಾಗಲಿದೆ.
ಆ್ಯಂಡರ್ಸನ್ ಮೊದಲ ಟೆಸ್ಟ್‌ನ ಐದನೇ ದಿನದಾಟದಲ್ಲಿ ಮ್ಯಾಜಿಕ್ ಸ್ಪೆಲ್ ಮೂಲಕ ಇಂಗ್ಲೆಂಡ್ ತಂಡ ಭಾರತವನ್ನು 227 ರನ್ ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ನೆರವಾಗಿದ್ದರು. ಭೋಜನ ವಿರಾಮಕ್ಕೆ ಮೊದಲು 7 ಓವರ್‌ಗಳಲ್ಲಿ ಕೇವಲ 8 ರನ್ ನೀಡಿ 3 ವಿಕೆಟ್‌ಗಳನ್ನು ಉರುಳಿಸಿದ್ದರು. ಇದರಲ್ಲಿ 4 ಮೇಡನ್ ಓವರ್ ಗಳಿದ್ದವು.
38ರ ಹರೆಯದ ಆ್ಯಂಡರ್ಸನ್ ಪಂದ್ಯದಲ್ಲಿ ಒಟ್ಟು 5 ವಿಕೆಟ್ ಗಳನ್ನು ಪಡೆದಿದ್ದರು.







