ಭಾರತದ ನಿಯಮಗಳಿಗೆ ಬದ್ಧರಾಗಿ : ಟ್ವಿಟ್ಟರ್ ಗೆ ಕೇಂದ್ರ ಸರ್ಕಾರ ಸಂದೇಶ

ಹೊಸದಿಲ್ಲಿ : ರೈತ ಪ್ರತಿಭಟನೆ ಬಗ್ಗೆ ತಪ್ಪು ಮಾಹಿತಿ ಮತ್ತು ಪ್ರಚೋದನಾಕಾರಿ ಬರಹಗಳನ್ನು ಹರಡುತ್ತಿರುವ ಸಾವಿರಕ್ಕೂ ಅಧಿಕ ಟ್ವಿಟ್ಟರ್ ಖಾತೆಗಳನ್ನು ನಿಷೇಧಿಸುವಂತೆ ಮಾಡಿದ್ದ ತುರ್ತು ಆದೇಶಕ್ಕೆ ನಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಟ್ವಿಟ್ಟರ್ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಟ್ವಿಟ್ಟರ್ ತನ್ನದೇ ನಿಯಮಾವಳಿ ಮತ್ತು ಮಾರ್ಗಸೂಚಿಯನ್ನು ಹೊಂದಿದ್ದರೂ ಭಾರತದಲ್ಲಿ ಕಾರ್ಯನಿರ್ವಹಿಸುವ ವಹಿವಾಟು ಸಂಸ್ಥೆ "ಕಡ್ಡಾಯವಾಗಿ ಭಾರತೀಯ ಕಾನೂನುಗಳನ್ನು ಗೌರವಿಸಬೇಕು ಹಾಗೂ ಅನುಸರಿಸಬೇಕು" ಎಂದು ಸಂದೇಶ ರವಾನಿಸಿದೆ. ತುರ್ತು ಆದೇಶದಲ್ಲಿ ಹೆಸರಿಸಿದ ಖಾತೆಗಳನ್ನು ತಕ್ಷಣ ನಿಷೇಧಿಸುವಂತೆ ಆದೇಶಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅನ್ವಯ ನೀಡಿರುವ ನಿರ್ದೇಶನವನ್ನು ಪಾಲಿಸಲು ಸಂಸ್ಥೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಟ್ವಿಟ್ಟರ್ ಅಧಿಕಾರಿಗಳಿಗೆ ಬಂಧನ ಭೀತಿ ಎದುರಾಗಿದೆ.
"ಕಾನೂನುಬದ್ಧವಾಗಿ ನೀಡಿದ ಆದೇಶಗಳಿಗೆ ವಹಿವಾಟು ಸಂಸ್ಥೆ ಬದ್ಧವಾಗಬೇಕು. ತಕ್ಷಣವೇ ಈ ಆದೇಶಕ್ಕೆ ತಲೆಬಾಗಬೇಕು. ಕೆಲ ದಿನಗಳ ಬಳಿಕ ಇದನ್ನು ಜಾರಿಗೊಳಿಸಿದರೆ ಅದು ಅರ್ಥಹೀನವಾಗುತ್ತದೆ" ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ವಾಷಿಂಗ್ಟನ್‌ನ ಕ್ಯಾಪಿಟೋಲ್ ಹಿಲ್‌ನಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಖಾತೆಗಳ ಮೇಲೆ ಕ್ರಮ ಕೈಗೊಂಡಿದ್ದ ಸಂಸ್ಥೆಯ ಕ್ರಮದ ಬಗ್ಗೆ ಉಲ್ಲೇಖಿಸಿ, ಭಾರತ ಹಾಗೂ ಅಮೆರಿಕಕ್ಕೆ ಸಂಬಂಧಿಸಿದಂತೆ ತಾರತಮ್ಯ ನೀತಿ ಅನುಸರಿಸುತ್ತಿರುವುದು ತೀರಾ ನಿರಾಶಾದಾಯಕ ಎಂದು ಬಣ್ಣಿಸಿದೆ.
ಸರ್ಕಾರದ ಸೂಚನೆಯಂತೆ 1178 ಖಾತೆಗಳನ್ನು ನಿಷೇಧಿಸಲು ಈ ಸಾಮಾಜಿಕ ಜಾಲತಾಣ ನಿರಾಕರಿಸಿದ ಬೆನ್ನಲ್ಲೇ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಟ್ವಿಟ್ಟರ್ ಜಾಗತಿಕ ನೀತಿ ಉಪಾಧ್ಯಕ್ಷ ಮೊನಿಕ್ ಮೆಚ್ ಮತ್ತು ಡೆಪ್ಯುಟಿ ಜನರಲ್ ಕೌನ್ಸೆಲ್ ಹಾಗೂ ಕಾನೂನು ವಿಭಾಗದ ಉಪಾಧ್ಯಕ್ಷ ಜಿಮ್ ಬಕರ್ ನಡುವೆ ಮಾತುಕತೆ ನಡೆಯುತ್ತಿದೆ.
ಸರ್ಕಾರದ ಆದೇಶ ಭಾರತೀಯ ಕಾನೂನಿಗೆ ಅನುಸಾರವಾಗಿಲ್ಲ ಎಂದು ಟ್ವಿಟ್ಟರ್ ಪ್ರತಿಕ್ರಿಸಿದೆ. ಖಾತೆಗಳನ್ನು ನಿಷೇಧಿಸುವ ಬದಲು ಸ್ವಲ್ಪಮಟ್ಟಿಗೆ ನಿರ್ಬಂಧಿಸುವುದಾಗಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರಂ ಸ್ಪಷ್ಟಪಡಿಸಿದೆ.







