ಮಂಗಳೂರು: ಹೊಸ ಕೊರೋನ ಸೋಂಕು ಭೀತಿ; ಕೇರಳ ವಿದ್ಯಾರ್ಥಿಗಳ ಪರೀಕ್ಷಾ ಮಾದರಿ ನಿಮ್ಹಾನ್ಸ್‌ಗೆ ರವಾನೆ

ಮಂಗಳೂರು : ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಕೊರೋನ ಪಾಸಿಟಿವ್ ದೃಢವಾದ ಹಿನ್ನೆಲೆ ಅವರಲ್ಲಿ ಹೊಸ ಕೊರೋನ ವೈರಸ್ ಇದೆಯೇ ಎಂದು ಖಾತರಿಪಡಿಸಲು ಇಲ್ಲಿನ ಆರೋಗ್ಯ ಇಲಾಖೆಯು ಕೇರಳದಿಂದ ಬಂದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮಾದರಿಗಳನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಿದೆ.
ಕಳೆದ ಒಂದು ತಿಂಗಳಲ್ಲಿ ಪರೀಕ್ಷೆಗಾಗಿ ಬಂದಿದ್ದ ಕೇರಳದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನ ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಹೊಸ ಕೊರೋನ ವೈರಸ್ ಇದೆಯೇ ಎಂದು ಪರೀಕ್ಷಿಸಲು ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ' ಜೊತೆ ಮಾತನಾಡಿದ ಆರೋಗ್ಯಧಿಕಾರಿ ರಾಮಚಂದ್ರ ಬಾಯಾರಿ, "ಇದು ವೈರಸ್‌ನ ಹೊಸ ತಳಿ ಎಂಬುದನ್ನು ಪತ್ತೆಹಚ್ಚಲು ಮಾದರಿಗಳನ್ನು ನಿಮ್ಹಾನ್ಸ್‌ಗೆ ಕಳುಹಿಸಲಾಗುವುದು. ವಿಶೇಷವಾಗಿ ಕೇರಳದ ಹಲವಾರು ವಿದ್ಯಾರ್ಥಿಗಳಲ್ಲಿ ಕೊರೋನ ದೃಢಪಟ್ಟ ಹಿನ್ನೆಲೆ ನಾವು ಈ ಕ್ರಮ ಕೈಗೊಂಡಿದ್ದೇವೆ'' ಎಂದು ಹೇಳಿದರು.
ಪ್ರಸ್ತುತ, ಕೇರಳದಿಂದ ಬರುವ ಜನರನ್ನು ಜಿಲ್ಲಾ ಗಡಿಯಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯ ಶಾಲೆಗಳು ಮತ್ತು ಕಾಲೇಜುಗಳಿಗೆ ಹಾಜರಾಗುವಾಗ ಕೇರಳದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೋನ ನೆಗೆಟಿವ್ ವರದಿ ಹೊಂದಿರಬೇಕಿದೆ. ಕೇರಳದ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿಯೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕೇರಳದಿಂದ ದಕ್ಷಿಣ ಕನ್ನಡಕ್ಕೆ ಬಸ್ ಮೂಲಕ ಪ್ರಯಾಣಿಸುವವರು ಪ್ರತಿ 15 ದಿನಗಳಿಗೊಮ್ಮೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ರಯಾಣವನ್ನು ಇನ್ನೂ ನಿರ್ಬಂಧಿಸಲಾಗಿಲ್ಲವಾದರೂ, ದಕ್ಷಿಣ ಕನ್ನಡದಲ್ಲಿ ವೈರಸ್ ಹರಡುವುದನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.







