ಶಿವಮೊಗ್ಗ: ಗಾಂಜಾ ಆರೋಪಿಗಳ ಪರೇಡ್

ಶಿವಮೊಗ್ಗ, ಫೆ.11: ನಗರದ ಡಿಎಆರ್ ಮೈದಾನದಲ್ಲಿ ಶಿವಮೊಗ್ಗ ಉಪವಿಭಾಗ ವ್ಯಾಪ್ತಿಯ ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಪರೇಡ್ ನಡೆಸಲಾಯಿತು.
ಗಾಂಜಾ ಆರೋಪಿಗಳ ಪರೇಡ್ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಗಾಂಜಾ ಮಾರಾಟ ಆರೋಪದಡಿ ಕೋರ್ಟ್‌ನಿಂದ ಜಾಮೀನಿನ ಮೇಲೆ ಹೊರಗಡೆ ಇದ್ದು, ಸನ್ನಡತೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಜಾಮೀನಿನ ಮೇಲೆ ಹೊರಗೆ ಬಂದವರು ಪುನಃ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ನಿಮ್ಮ ಮನೆಗಳಿಗೆ ಬಂದು ತಪಾಸಣೆ ಮಾಡಲಾಗುವುದು. ನಿಮ್ಮ ಮನೆಯಲ್ಲಿ ಗಾಂಜಾ ಇಡದಿದ್ದರೂ ಬೇರೆಡೆ ಇಟ್ಟಿರುವುದು ತಿಳಿದು ಬಂದರೆ ಅದಕ್ಕೆ ನೀವು ನೇರ ಹೊಣೆಯಾಗಲಿದ್ದೀರಿ ಎಂದು ಎಚ್ಚರಿಸಿದರು.
ಸನ್ನಡತೆ ಸರಿಪಡಿಸಿಕೊಳ್ಳದಿದ್ದರೆ, ಜಾಮೀನು ರದ್ದು ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಗಾಂಜಾ ಮಾರಾಟ, ಸಾಗಾಣಿಕೆಯಲ್ಲಿ ತೊಡಗಿದರೆ ಮುಂದೆ ಕಷ್ಟ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಹೆಚ್.ಟಿ ಶೇಖರ್, ಡಿವೈಎಸ್‌ಪಿ ಉಮೇಶ್ ಈಶ್ವರ್‌ನಾಯ್ಕ, ತುಂಗಾನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್, ಕೋಟೆ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ದೊಡ್ಡಪೇಟೆ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ಇದ್ದರು.







