ಮಹಿಳೆಯ ಸಂಶಯಾಸ್ಪದ ಸಾವು ಪ್ರಕರಣ: ಆರೋಪಿ ಪುತ್ರನ ಬಂಧನ

ಮಡಿಕೇರಿ, ಫೆ.11: ತಾಯಿಯನ್ನು ಹತ್ಯೆಗೈಯ್ದು, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾತೂರು ಪಂಚಾಯತ್ ವ್ಯಾಪ್ತಿಯ ಕೊಳ್ತೋಡು ಬೈಗೋಡು ನಿವಾಸಿ ಎಂ.ಕೆ.ದೇವಯ್ಯ (49) ಬಂಧಿತ ಆರೋಪಿ. ಕಳೆದ ಸಾಲಿನ ಡಿ.2 ರಂದು ದೇವಯ್ಯ ತನ್ನ ತಾಯಿ ಕಾಮವ್ವ(85) ಅವರನ್ನು ಗಲಾಟೆ ಸಂದರ್ಭ ದೂಡಿದ್ದಾನೆ ಎನ್ನಲಾಗಿದ್ದು, ವೃದ್ಧೆ ಈ ಸಂದರ್ಭ ಕೊನೆಯುಸಿರೆಳೆದಿದ್ದರು. ನಡೆದ ಘಟನೆಯನ್ನು ಮರೆಮಾಚುವ ಸಲುವಾಗಿ ದೇವಯ್ಯ ತಾಯಿಯ ದೇಹವನ್ನು ಮನೆ ಸಮೀಪದ ತೆರೆದ ಬಾವಿಗೆ ಎಸೆದಿದ್ದ. ಬಳಿಕ ವೃದ್ಧೆಯ ಸಾವು ಸಂಶಯಾಸ್ಪದ ಸಾವೆಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಂತದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವರದಿಯು ವೃದ್ಧೆ ನೀರಿನಲ್ಲಿ ಬಿದ್ದು ಸಾವನ್ನಪ್ಪಿಲ್ಲ ಎಂಬುದನ್ನು ದೃಢಪಡಿಸಿತ್ತು.
ಇದರ ಆಧಾರದಲ್ಲಿ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ನಡೆದ ತನಿಖೆ ನಡೆಸಿ ಇದೀಗ ಸತ್ಯಾಸತ್ಯತೆ ಬಯಲಿಗೆ ಬಂದಿದ್ದು, ದೇವಯ್ಯನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಸ್‍ಪಿ ಕ್ಷಮಾ ಮಿಶ್ರ ಮತ್ತು ವಿರಾಜಪೇಟೆ ಉಪ ವಿಭಾಗ ಡಿವೈಎಸ್‍ಪಿ ಸಿ.ಟಿ.ಜಯಕುಮಾರ್ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕರಾದ ಬಿ.ಎಸ್ ಶ್ರೀಧರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಬಿ.ಬಾಣಸೆ, ಪಿಎಸ್‍ಐ ಶ್ರೀಧರ್ ಮತ್ತು ಗ್ರಾಮಾಂತರ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.







