ಮಹಾರಾಷ್ಟ್ರ: ಸರಕಾರದ ವಿಮಾನದಲ್ಲಿ ಪ್ರಯಾಣಿಸಲು ರಾಜ್ಯಪಾಲರಿಗೆ ಅನುಮತಿ ನಿರಾಕರಣೆ

ಮುಂಬೈ, ಫೆ.11: ಮಹಾರಾಷ್ಟ್ರ ಸರಕಾರ ಹಾಗೂ ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟದ ಮುಂದುವರಿದ ಭಾಗವಾಗಿ, ಗುರುವಾರ ಉತ್ತರಾಖಂಡಕ್ಕೆ ತೆರಳಬೇಕಿದ್ದ ರಾಜ್ಯಪಾಲರಿಗೆ ಸರಕಾರದ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನಿರಾಕರಿಸಲಾಗಿದೆ.
ಸರಕಾರದ ವಿಮಾನ ಬಳಸಲು ರಾಜಭವನ ಸಲ್ಲಿಸಿದ್ದ ಅಧಿಕೃತ ವಿನಂತಿಗೆ ಬುಧವಾರ ರಾತ್ರಿಯವರೆಗೂ ಮುಖ್ಯಮಂತ್ರಿ ಕಚೇರಿಯಿಂದ ಅನುಮೋದನೆ ದೊರಕಲಿಲ್ಲ. ಬಳಿಕ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ವಾಣಿಜ್ಯ ಬಳಕೆಯ ವಿಮಾನದ ಮೂಲಕ ಡೆಹ್ರಾಡೂನ್‌ಗೆ ತೆರಳಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ. ಸರಕಾರದ ವಿಮಾನದ ಬಳಕೆಗೆ ಸಂಬಂಧಿಸಿದ ಎಲ್ಲಾ ವಿನಂತಿಗಳಿಗೂ ಮುಖ್ಯಮಂತ್ರಿ ಕಚೇರಿ ಅನುಮೋದನೆ ನೀಡಬೇಕು.
ಆದರೆ ರಾಜಭವನದಿಂದ ಕೋರಿಕೆ ಬಂದಿರುವ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲ. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಕಚೇರಿ ಮತ್ತು ರಾಜ್ಯ ವಿಮಾನಯಾನ ವಿಭಾಗ ಗಮನ ಹರಿಸಲಿದೆ ಎಂದು ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಹೇಳಿದ್ದಾರೆ. ಶಿಷ್ಟಾಚಾರದಂತೆ, ಕೋರಿಕೆ ಪತ್ರವನ್ನು ಅನುಮೋದನೆಗಾಗಿ ಮುಖ್ಯಮಂತ್ರಿ ಕಚೇರಿಗೆ ರವಾನಿಸಲಾಗಿದೆ ಎಂದು ರಾಜ್ಯ ವಿಮಾನಯಾನ ವಿಭಾಗದ ಪ್ರಧಾನ ಕಾರ್ಯದರ್ಶಿ ವಲ್ಸಾ ನಾಯರ್ ಸಿಂಗ್ ಹೇಳಿದ್ದಾರೆ.
ವಿಮಾನದ ಬಳಕೆಗಾಗಿ ಮುಖ್ಯಮಂತ್ರಿ ಕಚೇರಿಗೆ ಅಧಿಕೃತ ಕೋರಿಕೆ ಸಲ್ಲಿಸಲಾಗಿತ್ತು. ರಾಜ್ಯಪಾಲರು ಛತ್ರಪತಿ ಶಿವಾಜಿ ವಿಮಾನನಿಲ್ದಾಣವನ್ನು ಗುರುವಾರ ಬೆಳಿಗ್ಗೆ 10 ಗಂಟೆಗೆ ತಲುಪಿದಾಗ, ವಿಮಾನ ಟೇಕ್‌ಆಫ್ ಆಗಲು ಅನುಮತಿ ದೊರಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಳಿಕ ರಾಜ್ಯಪಾಲರು ವಾಣಿಜ್ಯ ಬಳಕೆಯ ವಿಮಾನದ ಮೂಲಕ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆಯನ್ನು ಖಂಡಿಸಿರುವ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಇಂತಹ ಅಹಂಕಾರದ ಸರಕಾರವನ್ನು ರಾಜ್ಯದಲ್ಲಿ ಇದುವರೆಗೆ ನೋಡಿಲ್ಲ. ಸರಕಾರದ ಯಂತ್ರೋಪಕರಣಗಳು ತನ್ನ ವೈಯಕ್ತಿಕ ಆಸ್ತಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾವಿಸಬಾರದು. ಅದು ರಾಜ್ಯದ ಆಸ್ತಿಯಾಗಿದೆ” ಎಂದು ಹೇಳಿದ್ದಾರೆ.







