ಕರ್ನಾಟಕದ ಗೋಹತ್ಯೆ ನಿಷೇಧ ಕಾನೂನು ಹಸುಗಳನ್ನೂ ರಕ್ಷಿಸುವುದಿಲ್ಲ, ಬಡವರನ್ನೂ ರಕ್ಷಿಸುವುದಿಲ್ಲ

ರಾಜ್ಯದ ಬಿಜೆಪಿ ಸರಕಾರವು ಇತ್ತೀಚಿಗೆ ತನ್ನ ಪಂಥೀಯ ಮತಬ್ಯಾಂಕನ್ನು ತೃಪ್ತಿಪಡಿಸಲು ಪ್ರಜಾಪ್ರಭುತ್ವಕ್ಕೆ ಸಲ್ಲದ ರೀತಿಯಲ್ಲಿ ಜಾನುವಾರುಗಳ ಹತ್ಯೆ ತಡೆ ಮತ್ತು ಸಂರಕ್ಷಣೆ ಮಸೂದೆ (ಗೋಹತ್ಯೆ ನಿಷೇಧ ಕಾನೂನು)ಯನ್ನು ತಂದಿದೆ. ಮಸೂದೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ಪಡೆಯಲು ವಿಫಲವಾದಾಗ ಸರಕಾರವು ಸುಗ್ರೀವಾಜ್ಞೆಯ ಮೂಲಕ ಅದನ್ನು ಅನುಷ್ಠಾನಕ್ಕೆ ತಂದಿದೆ. ಕರ್ನಾಟಕವು ಬಿಜೆಪಿ ಆಡಳಿತವಿರುವ ರಾಜ್ಯವಾಗಿದೆ ಮತ್ತು ಅದರ ನಾಯಕರು ಕೇಂದ್ರ ನಾಯಕತ್ವದಿಂದ ಶಾಭಾಷ್ ಎನಿಸಿಕೊಳ್ಳಲು ಕಾತರರಾಗಿರುವದರಿಂದ ರಾಜ್ಯದಲ್ಲಿ ಈ ಕಾನೂನನ್ನು ತರಲಾಗಿದೆ.
ಈ ಕಾನೂನು ಹೊಸದೇನಲ್ಲ. ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 2010ರಲ್ಲಿ ಅಧಿಕಾರದಲ್ಲಿದ್ದಾಗಲೇ ಭಾರೀ ವಿರೋಧದ ನಡುವೆಯೂ ಈ ಕಾನೂನನ್ನು ತರಲು ಪ್ರಯತ್ನಿಸಲಾಗಿತ್ತು. ಇಂತಹ ಕಾನೂನುಗಳ ಕಟು ಟೀಕಾಕಾರರಾಗಿರುವ, ಸ್ವತಃ ಬಹುಜನ ವರ್ಗಕ್ಕೆ ಸೇರಿರುವ ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿ ಗಾದಿಗೇರಿದ ಬಳಿಕ ಈ ಕಾನೂನನ್ನು ಪಕ್ಕಕ್ಕಿರಿಸಿದ್ದರು.
ಹಳೆಯ ಕಾನೂನಿನ ಕಡಿಮೆ ಕಠಿಣ ಆವೃತ್ತಿ ‘ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ,1964’ ಅಸ್ವಿತ್ವದಲ್ಲಿದ್ದು,ಕೆಲವು ನಿರ್ಬಂಧಗಳೊಂದಿಗೆ ಆಯ್ದ ಜಾನುವಾರುಗಳ ಹತ್ಯೆಗೆ ಅವಕಾಶ ನೀಡಿತ್ತು. ಈಗಿನ ಹೊಸ ಕಾನೂನು ಇದಕ್ಕಿಂತ ಬಹಳಷ್ಟು ಮುಂದಕ್ಕೆ ಸಾಗಿದೆ ಮತ್ತು 13 ವರ್ಷಕ್ಕಿಂತ ಕಡಿಮೆ ಪ್ರಾಯದ ಎಮ್ಮೆಗಳು ಸೇರಿದಂತೆ ಜಾನುವಾರುಗಳ ಹತ್ಯೆ ಮತ್ತು ಮಾಂಸ ಸೇವನೆಯ ಮೇಲೆ ಸಾರಾಸಗಟು ನಿಷೇಧವನ್ನು ಹೇರುವ ಮೂಲಕ ದೇಶದಲ್ಲಿಯ ಅತ್ಯಂತ ಕಠಿಣ ಕಾಯ್ದೆಗಳಲ್ಲೊಂದಾಗಿದೆ ಇದು.
ಕಾಯ್ದೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ತಂದಿರುವ ಕರ್ನಾಟಕ ಸರಕಾರವು ತಾನು ಗೋಹತ್ಯೆಯನ್ನು ತಡೆಯಲು ಸಾಂವಿಧಾನಿಕ ಬದ್ಧತೆಯನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದೆ. ಇದಕ್ಕೆ ಕಾರಣವೆಂದರೆ ಪಶು ಸಂಗೋಪನೆಗೆ ಸಂಬಂಧಿಸಿದ ನಿರ್ದೇಶಕ ನೀತಿಯಾಗಿರುವ ಸಂವಿಧಾನದ 48ನೇ ವಿಧಿಯಲ್ಲಿ,‘ಸರಕಾರವು ಕೃಷಿ ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಹಾಗೂ ಜಾನುವಾರುಗಳ ತಳಿಗಳನ್ನು ಉತ್ತಮಗೊಳಿಸಲು,ಆಕಳುಗಳು ಮತ್ತು ಕರುಗಳು ಮತ್ತು ಇತರ ಹಾಲು ನೀಡುವ ಹಾಗೂ ಭಾರವನ್ನೆಳೆಯುವ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲು ಕ್ರಮಗಳನ್ನು ಕೈಗೊಳ್ಳಬೇಕು ’ಎಂದು ಹೇಳಿರುವುದು. ಆದರೆ ನಿರ್ದೇಶಕ ನೀತಿಯು ಒಂದು ವಿಶಾಲ ಮಾರ್ಗಸೂಚಿಯಾಗಿದೆ ಮತ್ತು ಕಾನೂನಿನ ಮೂಲಕ ಜಾರಿಗೊಳಿಸುವಂಥದ್ದಲ್ಲ ಎನ್ನುವದನ್ನು ಇಲ್ಲಿ ಗಮನಿಸಬೇಕು.
ಇನ್ನೊಂದು ನಿರ್ದೇಶಕ ನೀತಿಯಾಗಿರುವ ಸಂವಿಧಾನದ 47ನೇ ವಿಧಿಯು ಇದಕ್ಕೆ ತದ್ವಿರುದ್ಧವಾಗಿದೆ. ಸರಕಾರವು ಪೌಷ್ಟಿಕಾಂಶ ಮಟ್ಟಗಳನ್ನು ಮತ್ತು ಜನರ ಜೀವನಮಟ್ಟವನ್ನು ಹೆಚ್ಚಿಸಬೇಕು ಎಂದು ಅದು ಹೇಳುತ್ತಿದೆ. ಸರಕಾರವು ಬೀಫ್ ಸೇವನೆಯನ್ನು ನಿಷೇಧಿಸಲು ನಿರ್ಧರಿಸಿದರೆ ಅದು ಭಾರೀ ಸಂಖ್ಯೆಯ ಅಲ್ಪಸಂಖ್ಯಾತರು ಮತ್ತು ಬಹುಜನ ವರ್ಗದವರನ್ನು ಪೌಷ್ಟಿಕಾಂಶಗಳ ಲಭ್ಯತೆಯಿಂದ ವಂಚಿತಗೊಳಿಸುತ್ತದೆ. ಈ ಜನರ ಪಾಲಿಗೆ ಗೋ ಜಾತಿಗೆ ಸೇರಿದ ಜಾನುವಾರುಗಳ ಮಾಂಸವು ಪ್ರೋಟಿನ್‌ನ ಪ್ರಮುಖ ಮೂಲವಾಗಿದೆ.
ಇನ್ನೊಂದು ನಿರ್ದೇಶಕ ನೀತಿ,ಸಂವಿಧಾನದ ವಿಧಿ 39ಡಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ಶಿಫಾರಸು ಮಾಡಿದೆ. ಆದರೆ ಇಂತಹ ನೀತಿಗಳನ್ನು ಅನುಷ್ಠಾನಿಸುವಲ್ಲಿ ರಾಜ್ಯ ಸರಕಾರದ ಉತ್ಸುಕತೆಯನ್ನು ನಾವೆಂದಾದರೂ ನೋಡಿದ್ದೇವೆಯೇ? ಸರಕಾರವು ತನ್ನ ಸಾಂವಿಧಾನಿಕ ಬದ್ಧತೆಗಳಿಗಿಂತ ತನ್ನ ಮತಬ್ಯಾಂಕ್ ನ್ನು ಭದ್ರಗೊಳಿಸಿಕೊಳ್ಳಲು ಬಹುಸಂಖ್ಯಾತರ ಭಾವನೆಗಳು ಮತ್ತು ಅತಿ ರಾಷ್ಟ್ರವಾದದ ಲಾಭ ಪಡೆದುಕೊಳ್ಳುತ್ತಿದೆ ಎನ್ನುವುದನ್ನು ಇದು ತೋರಿಸುತ್ತಿದೆ.
ನೂತನ ಕಾನೂನು ಎಮ್ಮೆ-ದನಗಳ ಸಾಕಣೆ, ಅವುಗಳ ಮಾಂಸದ ಸಂಸ್ಕರಣೆ ಮತ್ತು ಬಳಕೆಯನ್ನು ಅವಲಂಬಿಸಿರುವ ಗ್ರಾಮೀಣ ಪ್ರದೇಶಗಳ ಹಲವಾರು ಜನರು,ದನಗಾಹಿಗಳು,ಡೇರಿ ಕಾರ್ಮಿಕರು,ಕಸಾಯಿಗಳು ಮತ್ತು ಚರ್ಮೋದ್ಯಮ ಕಾರ್ಮಿಕರ ಜೀವನೋಪಾಯಗಳನ್ನು ಕಿತ್ತುಕೊಳ್ಳುತ್ತದೆ. ಅದು ಬೀಫ್ ಸೇವಿಸುವ ಜನರು ಮತ್ತು ರಾಜ್ಯದ ಆಹಾರ ಸಂಸ್ಕೃತಿಗಳ ಮೇಲೆ ನೇರ ಪ್ರಹಾರವಾಗಿದೆ.
ಗೋರಕ್ಷಣೆಯ ಹೆಸರಿನಲ್ಲಿ ಬಿಜೆಪಿ ಸಮಾಜದಲ್ಲಿ ಭೀತಿಯನ್ನು ಸೃಷ್ಟಿಸಿದೆ. ರಾಜ್ಯದಿಂದ ಹೊರಗಡೆಗೆ ಬೀಫ್ ಸಾಗಾಣಿಕೆ ಮಾಡದಂತೆ ಬಿಜೆಪಿ ಕಾರ್ಯಕರ್ತರು ಹಲವಾರು ಬೆದರಿಕೆಗಳನ್ನು ಒಡ್ಡಿದ್ದಾರೆ ಮತ್ತು ಬೀಫ್ ಸೇವಿಸುತ್ತಾರೆ, ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಮತ್ತು ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಶಂಕೆ ಬಂದರೂ ಅವರ ಮೇಲೆ ಮುಗಿಬೀಳಲು ಸ್ವಘೋಷಿತ ಗೋರಕ್ಷಕರಿಗೆ ಪರೋಕ್ಷ ಸಂಕೇತಗಳನ್ನು ರವಾನಿಸಿದ್ದಾರೆ.
ಜಾನುವಾರುಗಳನ್ನು ಸಾಗಿಸುತ್ತಿದ್ದಕ್ಕಾಗಿ ‘ಗೋರಕ್ಷಕ ’ರಿಂದ ಹಲ್ಲೆಗೊಳಗಾಗಿದ್ದ ಟ್ರಕ್ ಚಾಲಕನೋರ್ವನ್ನು ಬಂಧಿಸುವ ಮೂಲಕ ಪೊಲೀಸರು ಈಗಾಗಲೇ ನೂತನ ಕಾನೂನನ್ನು ಬಳಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ರಾಜ್ಯದಲ್ಲಿ ‘ಗೋರಕ್ಷಕ’ರಿಂದ ದಾಳಿಗಳು ನಡೆಯುತ್ತಿದ್ದು,ಹೊಸ ಕಾನೂನು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದನ್ನು ತಡೆಯುತ್ತದೆ.
ಹಲವಾರು ವರ್ಷಗಳಿಂದ ದೇಶಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಕಾನೂನುಗಳು ಗೋಜಾತಿಗೆ ಸೇರಿದ ಜಾನುವಾರುಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗುವಂತೆ ಮಾಡಲಿದೆ. ಏಕೆಂದರೆ ಹೊಸ ಕಾನೂನು ರೈತರು ತಮ್ಮ ಮುದಿ ದನಗಳು ಮತ್ತು ಎಮ್ಮೆಗಳನ್ನು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ,ಇದರಿಂದ ಜಾನುವಾರುಗಳನ್ನು ಸಾಕಣೆ ರೈತರಿಗೆ ಹೊರೆಯಾಗಲಿದೆ. ಇದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈಗಾಗಲೇ ಸಂಭವಿಸುತ್ತಿದೆ. ಬಿಜೆಪಿಗೆ ಗೋವುಗಳ ರಕ್ಷಣೆಯ ಬಗ್ಗೆ ನಿಜಕ್ಕೂ ಕಾಳಜಿಯಿದ್ದರೆ ಅದು ಅವುಗಳನ್ನು ಸಾಕಲು,ಮಾರಾಟ ಮಾಡಲು ಮತ್ತು ಬೀಫ್ ಸೇವನೆ ಮುಂದುವರಿಯಲು ಅವಕಾಶ ನೀಡಬೇಕು.
ಕೃಪೆ: thewire.in







