ಸುದೀರ್ಘ ಪ್ರತಿಭಟನೆಗೆ ಸಜ್ಜಾಗಲು ಸೌಲಭ್ಯಗಳು,ಮೂಲಸೌಕರ್ಯ ಹೆಚ್ಚಿಸಿಕೊಳ್ಳುತ್ತಿರುವ ರೈತರು
ಇಂಟರ್ನೆಟ್ ಸಮಸ್ಯೆ ಎದುರಾಗದಿರಲು ಪ್ರತ್ಯೇಕ ಆಪ್ಟಿಕಲ್ ಫೈಬರ್ ಲೈನ್ ಅಳವಡಿಕೆ

ಹೊಸದಿಲ್ಲಿ,ಫೆ.11: ನೂತನ ಕೃಷಿ ಕಾಯ್ದೆಗಳ ಕುರಿತು ಸೃಷ್ಟಿಯಾಗಿರುವ ಬಿಕ್ಕಟ್ಟು ಸದ್ಯಕ್ಕೆ ಪರಿಹಾರಗೊಳ್ಳುವ ಸಾಧ್ಯತೆ ಕಂಡುಬರದ ಹಿನ್ನೆಲೆಯಲ್ಲಿ ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರು ಸುದೀರ್ಘ ಪ್ರತಿಭಟನೆಗೆ ಸಜ್ಜಾಗಲು ಸ್ಥಳದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದ್ದಾರೆ.
ಮೋದಿ ಸರಕಾರವು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೆ ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಶಾಸನಾತ್ಮಕ ಖಾತರಿಯನ್ನು ನೀಡುವವರೆಗೆ ಅನಿರ್ದಿಷ್ಟಾವಧಿ ಕಾಲ ಪ್ರತಿಭಟನೆಯು ಮುಂದುವರಿಯಲಿದೆ ಎಂದು ಆಂದೋಲನದ ನೇತೃತ್ವವನ್ನು ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಪುನರುಚ್ಚರಿಸಿದ್ದಾರೆ.
ಸುದೀರ್ಘ ಅವಧಿಗೆ ಪ್ರತಿಭಟನೆಯನ್ನು ಮುಂದುವರಿಸಲು ನಮ್ಮ ಸಂವಹನ ವ್ಯವಸ್ಥೆ ಮತ್ತು ಇತರ ಮೂಲಸೌಕರ್ಯಗಳನ್ನು ಬಲಗೊಳಿಸುತ್ತಿದ್ದೇವೆ ಎಂದು ಸಿಂಘು ಗಡಿಯಲ್ಲಿ ಮೊಕ್ಕಾಂ ವ್ಯವಸ್ಥೆಯ ಹೊಣೆ ಹೊತ್ತಿರುವ ತಂಡದ ಸದಸ್ಯ ದೀಪ್ ಖತ್ರಿ ತಿಳಿಸಿದರು.
ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಮತ್ತು ದುಷ್ಕರ್ಮಿಗಳನ್ನು ದೂರವಿಡಲು ಮೋರ್ಚಾದ ನಾಯಕರು ಬಳಸುವ ಮುಖ್ಯವೇದಿಕೆಯಲ್ಲಿ ಮತ್ತು ಕೆಲವು ಗುರುತಿಸಿದ ಸ್ಥಳಗಳಲ್ಲಿ ನೂರು ಡಿಜಿಟಲ್ ವೀಡಿಯೊ ರೆಕಾರ್ಡರ್ ಸಹಿತ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿದಿನ ಬಹಳಷ್ಟು ಜನರು ಬಂದುಹೋಗುತ್ತಿರುವುದರಿಂದ ನಿಗಾಯಿರಿಸಲು ಮುಖ್ಯವೇದಿಕೆಯ ಹಿಂದೆ ನಿಯಂತ್ರಣ ಕೊಠಡಿಯೊಂದನ್ನು ಸಹ ಸಜ್ಜುಗೊಳಿಸಲಾಗುತ್ತಿದೆ. ಪ್ರತಿಭಟನಾ ಸ್ಥಳದಲ್ಲಿ ಗಸ್ತು ಮತ್ತು ಸಂಚಾರ ವ್ಯವಸ್ಥೆಯನ್ನು ಹಾಗೂ ರಾತ್ರಿಗಳಲ್ಲಿ ಕಾವಲು ನಿರ್ವಹಿಸಲು 600 ಸ್ವಯಂಸೇವಕರ ತಂಡವೊಂದನ್ನು ರೂಪಿಸಲಾಗುತ್ತಿದೆ. ಈ ಸ್ವಯಂಸೇವಕರಿಗೆ ಸುಲಭವಾಗಿ ಗುರುತಿಸಲಾಗುವ ಹಸಿರು ಜಾಕೆಟ್‌ಗಳು ಮತ್ತು ಗುರುತು ಚೀಟಿಗಳನ್ನು ನೀಡಲಾಗುತ್ತದೆ. ರೈತರು ಮುಖ್ಯವೇದಿಕೆಯಿಂದ ನಾಯಕರ ಭಾಷಣಗಳಂತಹ ಚಟುವಟಿಕೆಗಳನ್ನು ವೀಕ್ಷಿಸಲು ಸಾಧ್ಯವಾಗುವಂತೆ 700-800 ಮೀ.ಅಂತರದಲ್ಲಿ ಆಯಕಟ್ಟಿನ 10 ತಾಣಗಳಲ್ಲಿ ಎಲ್‌ಸಿಡಿ ಪರದೆಗಳನ್ನು ಸ್ಥಾಪಿಸುವ ಕೆಲಸವೂ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಸರಕಾರವು ಇತ್ತೀಚಿಗೆ ಮಾಡಿದ್ದಂತೆ ಅಂತರ್ಜಾಲ ಸೇವೆಯಲ್ಲಿ ಯಾವುದೇ ವ್ಯತ್ಯಯವನ್ನು ಎದುರಿಸಲು ಮೋರ್ಚಾ ವೈಫೈ ಸೌಲಭ್ಯಕ್ಕಾಗಿ ಪ್ರತ್ಯೇಕ ಆಪ್ಟಿಕಲ್ ಪೈಬರ್ ಲೈನ್‌ನ್ನು ಬಾಡಿಗೆಯ ನೆಲೆಯಲ್ಲಿ ಪಡೆದುಕೊಳ್ಳುತ್ತಿದೆ,ಮುಂಬರುವ ಬೇಸಿಗೆಯ ಹಿನ್ನೆಲೆಯಲ್ಲಿ ಮುಖ್ಯವೇದಿಕೆಯಲ್ಲಿ ವಿದ್ಯುತ್ ಚಾಲಿತ ಫ್ಯಾನ್‌ಗಳು ಮತ್ತು ಏರ್‌ಕಂಡಿಷನರ್‌ಗಳನ್ನೂ ಅಳವಡಿಸಲಾಗುತ್ತಿದೆ ಹಾಗೂ ಅಲ್ಲಿಯ ಇತರ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.
ಇದೇ ವೇಳೆ ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರು,ತಿಂಗಳುಗಟ್ಟಲೆ ಕಾಲ ಇಲ್ಲಿ ಮೊಕ್ಕಾಂ ಹೂಡಿ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ,ಹಾಗೆ ಮಾಡಲು ಜನರು ಅಥವಾ ಸಂಪನ್ಮೂಲಗಳ ಕೊರತೆಯಿಲ್ಲ ಎಂದು ಒತ್ತಿ ಹೇಳಿದ್ದಾರೆ.







