ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ ಮನೆಗೆ ಸಚಿವ ಸುರೇಶ್ ಕುಮಾರ್ ಭೇಟಿ

ಬೆಂಗಳೂರು, ಫೆ.12: ಶಾಲಾ ಶುಲ್ಕ ಪಾವತಿಸದಿರುವುದರಿಂದ ಅವಮಾನಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಯ ಮನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ ಧೈರ್ಯ ತುಂಬಿ ಸಮಾಧಾನ ಹೇಳಿದರು.
ಗುರುವಾರ ನಗರದ ಎಚ್.ಎಸ್.ಆರ್.ಲೇಔಟ್‍ನ ಸೋಮಸುಂದರ ಪಾಳ್ಯದ ಶಾಲೆಯ 10ನೆ ತರಗತಿ ವಿದ್ಯಾರ್ಥಿ ಶಾಲಾ ಶುಲ್ಕ ಪಾವತಿಸಿಲ್ಲವಾದ್ದರಿಂದ ಶಾಲೆಯ ಪ್ರಾಚಾರ್ಯರು ಎಲ್ಲ ವಿದ್ಯಾರ್ಥಿಗಳ ಮುಂದೆ ನಿಂದಿಸಿ ಅಪಮಾನಿಸಿ ಶಾಲಾ ಮಟ್ಟದ ಪರೀಕ್ಷೆಗೆ ನಿರಾಕರಣೆ ಮಾಡಿದ್ದರು ಎನ್ನಲಾಗಿದೆ.
ಸಹಪಾಠಿಗಳೆದುರಿಗೆ ಆದ ಅವಮಾನದಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಮುಂದಾಗಿದ್ದ ಎಂಬ ವಿಷಯ ಗಮನಕ್ಕೆ ಬಂದಾಗ ವಿದ್ಯಾರ್ಥಿಯ ಮನೆಗೆ ಖುದ್ದಾಗಿ ತೆರಳಿದ ಸುರೇಶ್ ಕುಮಾರ್, ವಿದ್ಯಾರ್ಥಿ ಮತ್ತು ಆತನ ಪೋಷಕರಿಗೆ ಧೈರ್ಯ ಹೇಳಿದರು.
ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಕುಳಿತು, ಶಾಲೆಯಲ್ಲಿ ಏನೇನು ನಡೆಯಿತೆಂದು ವಿಚಾರಿಸಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳೆದುರಿಗೆ ಆದ ಅವಮಾನದಿಂದ ನಾನು ಬದುಕುವುದೇ ಬೇಡ ಎಂದು ನಿರ್ಧರಿಸಿ ಆತ್ಮಹತ್ಯೆಗೆ ಮುಂದಾದೆ ಎಂದು ಹೇಳುತ್ತಿದ್ದಂತೆ ಅವನ ಮಾತನ್ನು ತಡೆದು, ಹೆಗಲ ಮೇಲೆ ಕೈಹಾಕಿ, ಜೀವನ ಇಷ್ಟಕ್ಕೆ ಮುಗಿಯುವುದಿಲ್ಲ. ಸಮಾಜದಲ್ಲಿ ಎಲ್ಲ ರೀತಿಯ ಜನ ಇರುತ್ತಾರೆ, ಇಂತಹದಕ್ಕೆಲ್ಲ ಹೆದರಿ ಕೂರಬಾರದು. ಎಲ್ಲದನ್ನೂ ಧೈರ್ಯವಾಗಿ ಎದುರಿಸಬೇಕು ಎಂದು ಹೇಳಿದರು.
ನೀನು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇಷ್ಟು ದಿನ ಕಷ್ಟದಲ್ಲಿ ಸಂಪಾದನೆ ಮಾಡಿ ನಿನ್ನನ್ನು ಕಷ್ಟಪಟ್ಟು ಬೆಳೆಸಿ ನಿನ್ನ ಮೇಲೆ ಅಪಾರ ವಿಶ್ವಾಸವಿಟ್ಟುಕೊಂಡಿರುವ ನಿನ್ನ ತಂದೆ ತಾಯಿ, ನಿನ್ನ ಪುಟ್ಟ ತಂಗಿಗೆ ಯಾರು ಗತಿ, ಅವರ ಕಥೆ ಏನಾಗುತಿತ್ತು ಎಂಬುದನ್ನು ನೀನು ಯೋಚಿಸಿದ್ದೀಯಾ? ಆತ್ಮಹತ್ಯೆಗೆ ಯಾವತ್ತೂ ಪ್ರಯತ್ನಿಸಬಾರದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತಹ ಮನಸ್ಸು ಕೆಲವರಿಗೆ ಇರುವುದಿಲ್ಲ. ಇಷ್ಟಕ್ಕೇ ಜೀವನವೂ ಮುಗಿಯುವುದಿಲ್ಲ. ಒಳ್ಳೆ ಕಾಲ ಬಂದೇ ಬರುತ್ತದೆ. ಅಲ್ಲಿತನಕ ಸಮಾಧಾನದಿಂದ ಇರಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
ನಿನಗೆ ಅಪಮಾನ ಮಾಡಿದ ಶಾಲೆಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಆ ಶಾಲೆ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾಗಬಾರದು, ನಿನ್ನ ತಂದೆ ತಾಯಿಗಳಿಗೆ ನೀನೇ ಧೈರ್ಯ ಹೇಳಬೇಕು ಎಂದು ಸುರೇಶ್ ಕುಮಾರ್ ವಿದ್ಯಾರ್ಥಿಗೆ ಕಿವಿಮಾತು ಹೇಳಿದರು.
ಬೆಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ, ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ನಿಂದಿಸುವುದು ಇಲ್ಲವೇ ಅಪಮಾನ ಮಾಡುವುದು ದುರ್ನಡತೆಯ ಪ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಶಾಲೆಗೆ ನೋಟಿಸ್ ನೀಡಲಾಗಿದೆ. ವಿದ್ಯಾರ್ಥಿಯ ಆತ್ಮಹತ್ಯೆ ಯತ್ನಕ್ಕೆ ಶಾಲೆಯೇ ನೇರ ಹೊಣೆಯಾಗಿರುವುದರಿಂದ ಅಮಾನವೀಯತೆ ಮತ್ತು ಕ್ರೂರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶಾಲೆಯ ವಿರುದ್ಧ ವಿವಿಧ ಕಾಯ್ದೆಗಳ ಅಡಿ ಸಮಜಾಯಿಷಿ ಕೇಳಿ ನೋಟಿಸ್ ನೀಡಲಾಗಿದೆ ಎಂದರು.







