ಮಂಗಳನ ಕಕ್ಷೆ ತಲುಪಿದ ಚೀನಾದ ಶೋಧಕ ನೌಕೆ

ಸಾಂರ್ದಭಿಕ ಚಿತ್ರ
ಬೀಜಿಂಗ್ (ಚೀನಾ), ಫೆ. 11: ಚೀನಾದ ಮಂಗಳ ಗ್ರಹ ಶೋಧಕ ನೌಕೆ ‘ತಿಯಾನ್ವೆನ್-1’ ಬುಧವಾರ ಕೆಂಪು ಗ್ರಹದ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಚೀನಾದ ಸರಕಾರಿ ಮಾಧ್ಯಮ ವರದಿ ಮಾಡಿದೆ.
ಇದು ಚೀನಾದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮದ ಇನ್ನೊಂದು ಪ್ರಮುಖ ಮೈಲಿಗಲ್ಲಾಗಿದೆ. ಚೀನಾವು 2022ರ ವೇಳೆಗೆ ಸಿಬ್ಬಂದಿಯುಕ್ತ ಬಾಹ್ಯಾಕಾಶ ನಿಲ್ದಾಣವನ್ನು ಉಡಾಯಿಸುವ ಯೋಜನೆಯನ್ನು ಹೊಂದಿದೆ. ಬಳಿಕ ಚಂದ್ರನ ಮೇಲೆ ಮಾನವನನ್ನು ಇಳಿಸುವ ಗುರಿಯನ್ನು ಹಾಕಿಕೊಂಡಿದೆ.
ಕಳೆದ ವರ್ಷದ ಜುಲೈ ತಿಂಗಳಲ್ಲಿ ‘ತಿಯಾನ್ವೆನ್-1’ ಶೋಧ ನೌಕೆಯನ್ನು ಉಡಾಯಿಸಲಾಗಿತ್ತು. ಅದು ಮೇ ತಿಂಗಳಿನಲ್ಲಿ ಮಂಗಳನ ಮೇಲೆ ಇಳಿಯುವ ನಿರೀಕ್ಷೆಯಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ಮಂಗಳ ಗ್ರಹ ಶೋಧ ನೌಕೆ ‘ಹೋಪ್’ ಕೆಂಪು ಗ್ರಹದ ಕಕ್ಷೆಯನ್ನು ಪ್ರವೇಶಿಸಿದ ಒಂದು ದಿನದ ಬಳಿಕ, ಚೀನಾದ ನೌಕೆ ಕಕ್ಷೆಯನ್ನು ಪ್ರವೇಶಿಸಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ನಿಟ್ಟಿನಲ್ಲಿ ಚೀನಾ ನೂರಾರು ಕೋಟಿ ಡಾಲರ್ಗಳನ್ನು ಸುರಿಯುತ್ತಿದೆ.
ಅಂತಿಮ ನೆಲ ಸ್ಪರ್ಶ ಯಶಸ್ವಿಯಾದರೆ, ಚೀನಾವು ಮೊದಲ ಯಾನದಲ್ಲೇ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿದ, ನೆಲಸ್ಪರ್ಶಗೈದ ಮತ್ತು ಅದರ ಅಂಗಳದಲ್ಲಿ ಶೋಧಕ ನೌಕೆಯನ್ನು ಇಳಿಸಿದ ಮೊದಲ ದೇಶವಾಗಿ ದಾಖಲೆಗೆ ಸೇರುತ್ತದೆ ಎಂದು ಚೀನಾ ವಿಜ್ಞಾನ ಅಕಾಡೆಮಿಯಲ್ಲಿರುವ ನ್ಯಾಶನಲ್ ಸ್ಪೇಸ್ ಸಯನ್ಸ್ ಸೆಂಟರ್ನ ಮುಖ್ಯಸ್ಥ ಚಿ ವಾಂಗ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.







