ಶೃಂಗೇರಿ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ 14 ಆರೋಪಿಗಳ ಬಂಧನ: ಎಸ್ಪಿ ಅಕ್ಷಯ್

ಚಿಕ್ಕಮಗಳೂರು, ಫೆ.11: ಜಿಲ್ಲೆಯ ಶೃಂಗೇರಿ ತಾಲೂಕಿನ ಗೂಚುವಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಖಚಿತ ಮಾಹಿತಿ ಆಧರಿಸಿ 14 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.
ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ನೇಮಿಸಿದ್ದ ತನಿಖಾಧಿಕಾರಿಗಳ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಐಜಿಪಿ ಇದರ ವರದಿ ಕೇಳಿದ್ದು, ಕರ್ತವ್ಯ ಲೋಪದಡಿಯಲ್ಲಿ ಶೃಂಗೇರಿ ಠಾಣೆಯ ಪಿಎಸ್ಸೈ, ಎಸ್ಸೈ ವಿರುದ್ಧ ಕ್ರಮ ವಹಿಸಲಾಗಿದೆ. ಸದ್ಯ ಎಎಸ್ಪಿ ಶೃತಿ ನೇತೃತ್ವದ ತಂಡ ತನಿಖೆಯನ್ನು ಮುಂದುವರಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ 14 ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ ಎಂದರು.
ತನಿಖೆಯನ್ನು ಹಲವು ಆಯಾಮಗಳಲ್ಲಿ ನಡೆಸಲಾಗುತ್ತಿದೆ ಎಂದ ಅವರು, ಸಂತ್ರಸ್ತೆಯ ಚಿಕ್ಕಮ್ಮನ ಬ್ಯಾಂಕ್ ಅಕೌಂಟ್‍ಗೆ ಹಣ ವರ್ಗಾವಣೆಯಾಗಿರುವುದು ಹಾಗೂ ಆಕೆಯ ಮೊಬೈಲ್ ನಂಬರ್ ಗಳ ಪೈಕಿ ನೂರಾರು ಮೊಬೈಲ್ ನಂಬರ್ ಗಳು ಬ್ಲಾಕ್ ಲಿಸ್ಟ್ ಗೆ ಸೇರ್ಪಡೆಯಾಗಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲೂ ತನಿಖೆ ಸಾಗಿದೆ ಎಂದು ಇದೇ ವೇಳೆ ಎಸ್ಪಿ ಮಾಹಿತಿ ನೀಡಿದರು.
ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ನಿಡುವಾಳೆ ಗ್ರಾಮದಲ್ಲಿ ಸಹೋದರ ಸಂಬಂಧಿಯೇ 7ನೇ ತರಗತಿ ಓದುತ್ತಿದ್ದ ತನ್ನ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಅಭಿಷೇಕ್ ಎಂಬಾತನನ್ನು ಬಂಧಿಸಲಾಗಿದೆ. ಮಲ್ಲಂದೂರು ಠಾಣಾ ವ್ಯಾಪ್ತಿಯಲ್ಲಿ ಸಂದೇಶ ಎಂಬ ವ್ಯಕ್ತಿ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ಆತನನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ. ಆವುತಿಯಲ್ಲಿ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದು, ಸದ್ಯ ಜಾಮೀನು ಪಡೆದುಕೊಂಡಿದ್ದಾನೆ ಎಂದು ಎಸ್ಪಿ ತಿಳಿಸಿದರು.
ತೊಂದರೆಯಲ್ಲಿರುವ ಸಾರ್ವಜನಿಕರಿದ್ದಲ್ಲೇ ಪೊಲೀಸ್ ಇಲಾಖೆ ತೆರಳಿ ನೆರವು ನೀಡುವ ದೃಷ್ಟಿಯಿಂದ ರಾಜ್ಯದ ಪೊಲೀಸ್ ಇಲಾಖೆ 112 ಸಹಾಯವಾಣಿಯನ್ನು ಆರಂಭಿಸುತ್ತಿದೆ. ಜಿಲ್ಲೆಯಲ್ಲಿ ಈ ಸಹಾಯವಾಣಿ ಫೆಭ್ರವರಿ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ಜಿಲ್ಲೆಯಲ್ಲಿ 112 ಸಹಾಯವಾಣಿಯಲ್ಲಿ ಕರ್ತವ್ಯ ನಿರ್ವಹಿಸಲು ಜಿಲ್ಲೆಯ 250 ಅಧಿಕಾರಿ, ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿದೆ ಎಂದರು.







